ಕೃಷಿಕ ಸಮಾಜದ ವತಿಯಿಂದ ರಾಷ್ಟ್ರೀಯ ರೈತ ದಿನಾಚರಣೆ – ಶ್ರೇಷ್ಠ ಕೃಷಿಕರಿಗೆ ಸನ್ಮಾನ

IMG 20251223 WA0251 ಕೃಷಿಕ ಸಮಾಜದ ವತಿಯಿಂದ ರಾಷ್ಟ್ರೀಯ ರೈತ ದಿನಾಚರಣೆ – ಶ್ರೇಷ್ಠ ಕೃಷಿಕರಿಗೆ ಸನ್ಮಾನ
Spread the love

ಹೊಸನಗರ: ಹೊಸನಗರ ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ನಿನ್ನೆ ತಾಲೂಕು ಕೃಷಿಕ ಸಮಾಜ ಹಾಗೂ ವಿವಿಧ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ್ ವಹಿಸಿದ್ದರು.

ಈ ಸಂದರ್ಭದಲ್ಲಿ ಸಮಗ್ರ ಕೃಷಿ ಪದ್ಧತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಾಲೂಕಿನ ರೈತರಾದ ಚೂಡಪ್ಪ ನಾಯ್ಕ (ಹೊಸಕೆಸರೆ), ಕೃಷ್ಣ ನಾಯ್ಕ (ಗಿಣಿಕಲ್), ಸುಬ್ರಹ್ಮಣ್ಯ ಆಚಾರ್ (ಗವಟೂರು) ಹಾಗೂ ಗುರುರಾಜ (ಕರಿಗೇರಸು) ಅವರನ್ನು ಸನ್ಮಾನಿಸಿ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

img 20251223 wa02528524990312467960305 ಕೃಷಿಕ ಸಮಾಜದ ವತಿಯಿಂದ ರಾಷ್ಟ್ರೀಯ ರೈತ ದಿನಾಚರಣೆ – ಶ್ರೇಷ್ಠ ಕೃಷಿಕರಿಗೆ ಸನ್ಮಾನ


ಕಾರ್ಯಕ್ರಮದಲ್ಲಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಸಚಿನ್ ಹೆಗಡೆ, ಭಾರತದ ಐದನೇ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಕೃಷಿ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಳ ಸ್ಮರಣಾರ್ಥವಾಗಿ ಪ್ರತಿವರ್ಷ ಡಿಸೆಂಬರ್ 23ರಂದು ರಾಷ್ಟ್ರೀಯ ರೈತ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ರೈತರು ವೈಜ್ಞಾನಿಕ ಕೃಷಿ ಪದ್ಧತಿ ಹಾಗೂ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಅಧ್ಯಕ್ಷೀಯ ಭಾಷಣದಲ್ಲಿ ಮಲ್ಲಿಕಾರ್ಜುನ್, ಇಂದಿನ ದಿನಗಳಲ್ಲಿ ಕೃಷಿ ಕ್ಷೇತ್ರವು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಮಲೆನಾಡು ಪ್ರದೇಶದ ರೈತರು ಬೆಳೆರೋಗಗಳು, ಪ್ರಕೃತಿ ವೈಪರೀತ್ಯ, ಕಾರ್ಮಿಕರ ಕೊರತೆ ಹಾಗೂ ಬೆಲೆ ಏರಿಳಿತದಂತಹ ಸಮಸ್ಯೆಗಳಿಂದ ಸಂಕಷ್ಟದಲ್ಲಿದ್ದಾರೆ. ರೈತರು ಅಗತ್ಯ ಮಾಹಿತಿಯನ್ನು ಪಡೆದು ಸಂಘಟಿತರಾಗಿ ಸದೃಢವಾಗಿ ನಿಲ್ಲಬೇಕಿದೆ ಎಂದು ಹೇಳಿದರು. ಜೊತೆಗೆ ತಾಲೂಕು ಕೃಷಿಕ ಸಮಾಜದ ವತಿಯಿಂದ ಬರುವ ಜನವರಿ ತಿಂಗಳಲ್ಲಿ ಕೃಷಿ ಹಬ್ಬ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಘೋಷಿಸಿದರು.
ಕಾರ್ಯಕ್ರಮವು ರೈತರ ಸಾಧನೆಯನ್ನು ಗುರುತಿಸುವ ಜೊತೆಗೆ ಅವರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ, ಕೃಷಿ ಕ್ಷೇತ್ರದ ಮಹತ್ವವನ್ನು ಮತ್ತೊಮ್ಮೆ ಎತ್ತಿ ಹಿಡಿಯುವ ವೇದಿಕೆಯಾಗಿತು.

ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಧರ್ಮೇಂದ್ರ ಮಾತನಾಡಿ, ನಮ್ಮ ಭಾಗದ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿ ವರ್ಗ ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಹರಿಸಬೇಕು ಎಂದು ಆಗ್ರಹಿಸಿದರು. ಅರಸಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನೂ ಮೂಲಭೂತ ಸೌಕರ್ಯಗಳಿಲ್ಲದೆ, ಕುಡಿಯುವ ನೀರಿನ ಸೌಲಭ್ಯವಿಲ್ಲದ ಮನೆಗಳು ಇರುವುದನ್ನು ಅವರು ಪ್ರಸ್ತಾಪಿಸಿದರು. ಕೃಷಿ ಮಾಡಲು ಬಿಡಿ, ಕುಡಿಯಲು ಸಹ ನೀರು ಸಿಗದ ಪರಿಸ್ಥಿತಿಯಲ್ಲಿ ಹಲವಾರು ರೈತರು ಜೀವನ ಸಾಗಿಸುತ್ತಿದ್ದಾರೆ ಎಂದು ಅವರು ನೋವು ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ,ಮ್ಯಾಮ್ ಕೋಸ್ ನಿರ್ದೇಶಕರಾದ ಕೆ.ವಿ ಕೃಷ್ಣ ಮೂರ್ತಿ,ಕಾರ್ಯದರ್ಶಿ ಲಕ್ಷ್ಮೀನಾರಾಯಣ , ಖಜಾಂಚಿ ಸೋಮಶೇಖರ ಟಿ ಡಿ ,ನಿರ್ದೇಶಕರಾದ ಶಿವಕುಮಾರ್, ವಿನಾಯಕ್, ಗಿರೀಶ ಹೆಚ್, ಮತ್ತು ರೈತ ಉತ್ಪಾದಕ ಕಂಪನಿಯ ಹೊಸನಗರ ಅಧ್ಯಕ್ಷರಾದ ಎನ್ ಆರ್ ದೇವಾನಂದ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು


Spread the love

Leave a Reply

Your email address will not be published. Required fields are marked *