ಎನ್. ಕಾರ್ತಿಕ್ ಕೌಂಡಿನ್ಯ
ಗ್ರಾಮದ ಗಡಿ ದಾಟಿ ರಾಷ್ಟ್ರದ ನಕ್ಷೆಯಲ್ಲಿ ಹೆಸರು ಮೂಡಿಸಿದವರು – ಹೊಸನಗರ ತಾಲೂಕಿನ GEN-Z ಯುವ ಸಾಧಕರು. 2025ರಲ್ಲಿ ದೇಶದಾದ್ಯಂತ ಸದ್ದು ಮಾಡಿರುವ ಈ ಯುವಶಕ್ತಿ, “ವಯಸ್ಸು ಅಡ್ಡಿಯಲ್ಲ, ಸ್ಥಳ ಮಿತಿಯಲ್ಲ” ಎಂಬ ಸಂದೇಶವನ್ನು ಗಟ್ಟಿಯಾಗಿ ಸಾರಿದೆ. ಮೊಬೈಲ್, ಮಿಷನ್ ಮತ್ತು ಮಿಂಚುವ ಕನಸುಗಳೊಂದಿಗೆ ಬೆಳೆದ GEN-Z ಪೀಳಿಗೆ, ಹೊಸನಗರದ ಮಣ್ಣಿನಿಂದಲೇ ರಾಷ್ಟ್ರಮಟ್ಟದ ವೇದಿಕೆಗೆ ಹೋರಾಟ, ಪರಿಶ್ರಮ ದಿಂದ ಹಾರಾಟ ಮಾಡಿದ್ದಾರೆ.
ಡಿಜಿಟಲ್ ಪ್ಲಾಟ್ಫಾರ್ಮ್ಗಳಿಂದ ಹಿಡಿದು ಸಾಮಾಜಿಕ ಹೋರಾಟ, ಕ್ರೀಡೆ, ಶಿಕ್ಷಣ ಹಾಗೂ ಹೊಸ ಆವಿಷ್ಕಾರಗಳವರೆಗೂ ಇವರ ಸಾಧನೆ ವೈರಲ್ ಆಗುತ್ತಿದೆ. ಟ್ರೆಂಡ್ ಸೃಷ್ಟಿಸುವ ಆಲೋಚನೆ, ಧೈರ್ಯ ಮತ್ತು ನಿರಂತರ ಪರಿಶ್ರಮ – ಈ ಮೂರು ಅಸ್ತ್ರಗಳೊಂದಿಗೆ ಹೊಸನಗರದ GEN-Z ಯುವಕರು “ಸಾಧನೆಗೆ ಪಿನ್ಕೋಡ್ ಇಲ್ಲ” ಎಂಬುದನ್ನು ಸಾಬೀತುಪಡಿಸಿದ್ದಾರೆ.ಇದು ಕೇವಲ ವ್ಯಕ್ತಿಗಳ ಕಥೆಯಲ್ಲ; ಇದು ಒಂದು ತಾಲೂಕಿನ ಯುವ ಕ್ರಾಂತಿ. ಹೊಸನಗರ ಈಗ ಕೇವಲ ಭೌಗೋಳಿಕ ಹೆಸರು ಅಲ್ಲ – ಅದು GEN-Z ಸಾಧನೆಯ ಬ್ರ್ಯಾಂಡ್ ಆಗಿ ದೇಶದ ಗಮನ ಸೆಳೆಯುತ್ತಿದೆ. 🚀🔥

ಅಂಧತ್ವಕ್ಕೆ ಸವಾಲು ಹಾಕಿ ಅಂತರಾಷ್ಟ್ರೀಯ ಅಂಗಳದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ಕಾವ್ಯ ವೆಂಕಟೇಶ್ ಆಚಾರ್
ರಿಪ್ಪನ್ ಪೇಟೆಯ ಬರುವೆ ಗ್ರಾಮದ ಆಚಾರ್ ಕೇರಿಯ,ಅಂಧರ ಕ್ರಿಕೆಟ್ ತಂಡದ ಪ್ರಮುಖ ಆಟಗಾರ್ತಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರು ಮೆರೆಯಿಸಿದವರು ಕಾವ್ಯ ವೆಂಕಟೇಶ್ ಆಚಾರ್. ಗ್ರಾಮೀಣ ಪ್ರತಿಭೆಗೂ ವಿಶ್ವ ವೇದಿಕೆ ಸಿಗಬಹುದು ಎಂಬುದಕ್ಕೆ ಕಾವ್ಯ ಅವರ ಜೀವನವೇ ಜೀವಂತ ಸಾಕ್ಷಿ.ಜಯಮ್ಮ–ವೆಂಕಟೇಶ್ ಆಚಾರ್ ದಂಪತಿಯ ಪುತ್ರಿಯಾದ ಕಾವ್ಯಾ, ನಾಲ್ಕನೇ ತರಗತಿಯವರೆಗೂ ಪಟ್ಟಣದ ಬರುವೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಬಾಲ್ಯದಲ್ಲೇ ದೃಷ್ಟಿ ಸಮಸ್ಯೆ ಎದುರಾದರೂ, ಅದನ್ನು ಅಸಹಾಯಕತೆಯಾಗಿ ಪರಿಗಣಿಸದೆ ಧೈರ್ಯವನ್ನೇ ತಮ್ಮ ಶಕ್ತಿಯನ್ನಾಗಿ ಮಾಡಿಕೊಂಡರು. 2009ರಿಂದ 2015ರವರೆಗೆ ಶಿವಮೊಗ್ಗದ ಗೋಪಾಲ ಬಡಾವಣೆಯ ಶಾರದ ಅಂಧರ ಶಾಲೆಯಲ್ಲಿ ಶಿಕ್ಷಣ ಪಡೆದು, ತಮ್ಮ ಬದುಕಿಗೆ ಹೊಸ ದಿಕ್ಕು ಕಂಡುಕೊಂಡರು.
ಅಲ್ಲಿ ಬೆಳೆಯುತ್ತಿದ್ದ ಕ್ರೀಡಾ ಪ್ರತಿಭೆ, ಮುಂದೆ ಬೆಂಗಳೂರು ಸಮರ್ಥನಂ ಅಂಧರ ವಿಕಾಸ ಕೇಂದ್ರದಲ್ಲಿ ಬಿ.ಎ ಪದವಿ ಪೂರ್ಣಗೊಳಿಸುವ ತನಕ ಹುರಿದುಂಬಿತು. ಪ್ರಸ್ತುತ ಅವರು ಜ್ಞಾನಭಾರತಿ ಎಜುಕೇಶನ್ ಸೊಸೈಟಿಯಲ್ಲಿ ಎಂ.ಎ ವ್ಯಾಸಾಂಗ ಮಾಡುತ್ತಿದ್ದು, ವಿದ್ಯಾಭ್ಯಾಸ ಮತ್ತು ಕ್ರೀಡೆಯನ್ನು ಸಮತೋಲನದಿಂದ ಮುಂದುವರೆಸುತ್ತಿದ್ದಾರೆ.
ಕ್ರಿಕೆಟ್ ಕೇವಲ ಆಟವಲ್ಲ, ಬದುಕಿನ ಸವಾಲುಗಳನ್ನು ಎದುರಿಸುವ ಸಾಧನ ಎಂಬಂತೆ ಕಾವ್ಯಾ ತಮ್ಮನ್ನು ತಾವು ರೂಪಿಸಿಕೊಂಡರು. ಅಂಧರ ವಿಶ್ವಕಪ್ನಲ್ಲಿ ಭಾರತ ತಂಡದೊಂದಿಗೆ ಜಯ ಸಾಧಿಸಿ, ದೇಶದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ ಅವರು, ನಮ್ಮ ತಾಲೂಕಿಗೆ ಹೆಮ್ಮೆ.

ರಿಪ್ಪನ್ ಪೇಟೆ ಸಮೀಪದ ಬಾಳೂರು -ಹಾಲುಗುಡ್ಡೆ ಗ್ರಾಮದ ಗಗನ್,ರಾಷ್ಟ್ರಮಟ್ಟದ ಕಬಡ್ಡಿ ಅಂಗಳದಲ್ಲಿ ತನ್ನದೇ ಆದ ಗುರುತು ಮೂಡಿಸಿರುವ ಯುವ ಕ್ರೀಡಾಪಟು ಗಗನ್ ಗೌಡ ಇಂದು ನಮ್ಮ ತಾಲೂಕಿನ ಹೆಮ್ಮೆ.
ಚಿಕ್ಕ ವಯಸ್ಸಿನಲ್ಲೇ ಕಬಡ್ಡಿ ಆಟದ ಮೇಲೆ ಆಸಕ್ತಿ ಬೆಳೆಸಿಕೊಂಡ ಗಗನ್ ಗೌಡ, ಶಾಲಾ ಮಟ್ಟದ ಸ್ಪರ್ಧೆಗಳಿಂದಲೇ ತನ್ನ ಪ್ರತಿಭೆಯನ್ನು ಮೆರೆದವರು. ನಿರಂತರ ಶಿಸ್ತು, ಕಠಿಣ ಅಭ್ಯಾಸ ಮತ್ತು ಸೋಲನ್ನು ಗೆಲುವಾಗಿ ಪರಿವರ್ತಿಸುವ ಮನೋಬಲದಿಂದ ಜಿಲ್ಲೆ, ರಾಜ್ಯ ಹಂತಗಳನ್ನು ದಾಟಿ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಹೆಸರು ಮಾಡಿದರು.
ಕಬಡ್ಡಿ ಕೇವಲ ಆಟವಲ್ಲ, ಜೀವನವೇ ಎಂಬಂತೆ ಬದುಕಿದ ಗಗನ್ ಗೌಡ ಅವರಿಗೆ ಪ್ರೋ ಕಬಡ್ಡಿ ಲೀಗ್ ದೊಡ್ಡ ವೇದಿಕೆಯಾಯಿತು. ತಮ್ಮ ಪರಿಶ್ರಮದ ಫಲವಾಗಿ, ದೇಶಾದ್ಯಂತ ಜನಪ್ರಿಯವಾದ ಯುಪಿ ಯೋಧ ತಂಡದ ಮುಂಚೂಣಿ ಆಟಗಾರನಾಗಿ ಆಯ್ಕೆಯಾಗಿದ್ದು, ಕಬಡ್ಡಿ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ದಿಟ್ಟ ದಾಳಿ, ಚುರುಕಾದ ಚಲನೆ ಮತ್ತು ತಂಡಕ್ಕಾಗಿ ಹೋರಾಡುವ ಮನೋಭಾವ ಇಂದು ಲಕ್ಷಾಂತರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಗ್ರಾಮೀಣ ಹಿನ್ನಲೆಯಲ್ಲಿ ಬೆಳೆದು, ರಾಷ್ಟ್ರೀಯ ಮಟ್ಟದ ಲೀಗ್ನಲ್ಲಿ ಆಡುತ್ತಿರುವ ಗಗನ್ ಗೌಡ ಅವರು ನಮ್ಮೂರಿನ ಯುವಕರಿಗೆ ಪ್ರೇರಣೆಯ ದೀಪ. “ಸಾಧನೆಗೆ ಸ್ಥಳ ಅಡ್ಡಿಯಾಗದು” ಎಂಬುದಕ್ಕೆ ಅವರ ಜೀವನವೇ ಜೀವಂತ ಉದಾಹರಣೆ.

8 ವರ್ಷಗಳ ಹೋರಾಟದಿಂದ ರಾಷ್ಟ್ರದ ಗಮನ ಸೆಳೆದ ಯುವಶಕ್ತಿ – ಹೊಸನಗರ ತಾಲೂಕಿನ ವಾರಂಬಳ್ಳಿ ಗ್ರಾಮದ ಯುವಕ ವಿನಾಯಕ ಪ್ರಭು ವಾರಂಬಳ್ಳಿ ಇಂದು ಕೇವಲ ಒಬ್ಬ ಸಾಮಾಜಿಕ ಕಾರ್ಯಕರ್ತನಲ್ಲ; ಸಮಸ್ಯೆಯನ್ನು ಹೋರಾಟವಾಗಿ, ಹೋರಾಟವನ್ನು ಪರಿಹಾರವಾಗಿ ರೂಪಿಸಿದ ಯುವಕ, ತನ್ನೂರಿನಲ್ಲಿ ವರ್ಷಗಳಿಂದ ಕಾಡುತ್ತಿದ್ದ ನೆಟ್ವರ್ಕ್ ಸಮಸ್ಯೆಯನ್ನು ಸಾಮಾನ್ಯ ಅಸಹಾಯಕತೆಯಾಗಿ ಬಿಟ್ಟುಬಿಡದೆ, ಅದನ್ನೇ ತನ್ನ ಹೋರಾಟದ ಕೇಂದ್ರವನ್ನಾಗಿ ಮಾಡಿಕೊಂಡವರು ವಿನಾಯಕ ಪ್ರಭು. ಗ್ರಾಮಸ್ಥರನ್ನು ಸಂಘಟಿಸಿ, ನಿರಂತರವಾಗಿ 8 ವರ್ಷಗಳ ಕಾಲ ಶಾಂತ, ಸಂಯೋಜಿತ ಮತ್ತು ಸತತ ಹೋರಾಟ ನಡೆಸಿದರು. ಈ ಹೋರಾಟದ ಪ್ರತಿಧ್ವನಿ ಸ್ಥಳೀಯ ಮಟ್ಟದಲ್ಲೇ ನಿಲ್ಲದೇ, ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತಲುಪಿತು. ಪರಿಣಾಮವಾಗಿ, “ವಾರಂಬಳ್ಳಿ ನೆಟ್ವರ್ಕ್ ಸಮಸ್ಯೆ” ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಐತಿಹಾಸಿಕ ಕ್ಷಣ ರೂಪುಗೊಂಡಿತು.
ಈ ಹೋರಾಟದ ಕೇಂದ್ರ ಬಿಂದುವಾಗಿದ್ದ ವಿನಾಯಕ ಪ್ರಭು ಅವರ ಪ್ರಯತ್ನ ಫಲವಾಗಿ, 2025ರಲ್ಲಿ BSNL ನೆಟ್ವರ್ಕ್ ಕಾರ್ಯಾರಂಭಗೊಂಡಿತು. ಇದು ಕೇವಲ ತಾಂತ್ರಿಕ ಸೌಲಭ್ಯವಲ್ಲ; ಗ್ರಾಮೀಣ ಭಾರತದಲ್ಲಿ ಜನಸಾಮಾನ್ಯರ ಧ್ವನಿಗೆ ದೊರೆತ ಜಯ. ಈ ಸಾಧನೆಯೂ ಸಹ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ.
ಇದೊಂದೇ ಅಲ್ಲ. ‘ಪ್ರಭು ವಾರಂಬಳ್ಳಿ’ ಎಂಬ ಹೆಸರಿನಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿ ಈ ವರ್ಷ ಅವರು ರಾಜ್ಯಾದ್ಯಂತ ಜನರ ಗಮನ ಸೆಳೆದಿದ್ದಾರೆ. ಸಮಾಜಮುಖಿ ವಿಚಾರಗಳು, ಗ್ರಾಮೀಣ ಸಮಸ್ಯೆಗಳು, ಯುವಕರ ಜವಾಬ್ದಾರಿ—ಇವೆಲ್ಲವನ್ನೂ ಡಿಜಿಟಲ್ ವೇದಿಕೆಯಲ್ಲಿ ಸರಳವಾಗಿ, ಸ್ಪಷ್ಟವಾಗಿ ಮಂಡಿಸುವ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.
ಸಾಮಾಜಿಕ ಕ್ಷೇತ್ರದಲ್ಲಿ ನಿರಂತರ ಸೇವೆ, ಜನರ ಸಮಸ್ಯೆಗೆ ಧ್ವನಿಯಾಗುವ ಧೈರ್ಯ ಮತ್ತು ಡಿಜಿಟಲ್ ಯುಗಕ್ಕೆ ತಕ್ಕ ಚಿಂತನೆ—ಇವೆಲ್ಲದರ ಸಮನ್ವಯವೇ ವಿನಾಯಕ ಪ್ರಭು ವಾರಂಬಳ್ಳಿ. ಇಂದು ಅವರು GEN-Z ಯುವಕರಿಗೆ ಮಾದರಿಯಾಗಿರುವ ಹೆಸರು.

ಅರಸಾಳು ಗ್ರಾಮದ ಕವನಶ್ರೀ – ಗಿನ್ನೆಸ್ ವೇದಿಕೆಯಲ್ಲಿ ಕನ್ನಡದ ಹೆಮ್ಮೆಯ ಹೆಸರು
ಅರಸಾಳು ಗ್ರಾಮದ ಶಿಕ್ಷಕರಾಗಿದ್ದ ದಿ. ಮಂಜಯ್ಯ.ಟಿ ಹಾಗೂ ಕುಸುಮಾವತಿ ಅವರ ಪುತ್ರಿ ಕವನಶ್ರೀ, ತಮ್ಮ ಅಪಾರ ಕಠಿಣ ಪರಿಶ್ರಮ, ಪ್ರತಿಭೆ ಮತ್ತು ಅಚಲ ಸಂಕಲ್ಪದ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪುಸ್ತಕದಲ್ಲಿ ತಮ್ಮ ಹೆಸರು ಅಚ್ಚಳಿಯುವಂತೆ ದಾಖಲಿಸಿ, ದೇಶ-ವಿದೇಶಗಳಲ್ಲಿ ಕನ್ನಡಿಗರ ಹೆಮ್ಮೆ ಹೆಚ್ಚಿಸಿದ್ದಾರೆ.ಚೆನ್ನೈನ ಎಸ್.ಆರ್.ಎಂ ಆಡಿಟೋರಿಯಂನಲ್ಲಿ ನಡೆದ ವಿಶಿಷ್ಟ ಹಾಗೂ ಅಪರೂಪದ ‘ಸ್ಯಾಂಪಲ್ಸ್ ಡಿಸ್ಪ್ಲೇ’ ಕಾರ್ಯಕ್ರಮದಲ್ಲಿ, ಕವನಶ್ರೀ ಅವರು “ಮದರ್ ಇಂಡಿಯಾಸ್ ಕ್ರೋಶೆ ಕ್ವೀನ್ಸ್” ವಿಭಾಗದಲ್ಲಿ ಒಟ್ಟು 1,00,581 ಕ್ರೋಶೆ ಸ್ಕ್ವೇರ್ ಸ್ಯಾಂಪಲ್ಗಳನ್ನು ತಯಾರಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದರು. ಈ ಅದ್ಭುತ ಸಾಧನೆ ಮೂಲಕ ಅವರು ಗಿನ್ನೆಸ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದು, ಇದು ಕೇವಲ ವೈಯಕ್ತಿಕ ಜಯವಲ್ಲ; ಭಾರತೀಯ ಮಹಿಳಾ ಸೃಜನಶೀಲತೆಗೆ ದೊರೆತ ಅಂತರಾಷ್ಟ್ರೀಯ ಗೌರವವಾಗಿದೆ.
ಸೂಕ್ಷ್ಮತೆ, ಸಹನೆ ಮತ್ತು ನಿರಂತರ ಅಭ್ಯಾಸ ಅಗತ್ಯವಿರುವ ಕ್ರೋಶೆಯಲ್ಲಿ ಈ ಮಟ್ಟದ ಸಾಧನೆ ಮಾಡುವುದು ಅಸಾಧ್ಯವೆನಿಸಿದರೂ, ಕವನಶ್ರೀ ಅವರ ಅಚಲ ನಂಬಿಕೆ ಮತ್ತು ಶ್ರಮ ಅದನ್ನು ಸಾಧ್ಯವನ್ನಾಗಿ ಮಾಡಿದೆ. ಶಿಕ್ಷಕರ ಕುಟುಂಬದ ಮೌಲ್ಯಗಳು, ಅವರ ಸಾಧನೆಯ ಹಿಂದಿರುವ ಶಕ್ತಿಯಾಗಿವೆ.
ನಮ್ಮ ಸುತ್ತಮುತ್ತಲೂ ಅನೇಕ ಪ್ರತಿಭಾವಂತರು ಇದ್ದಾರೆ. ಅವರು ದೊಡ್ಡ ವೇದಿಕೆಯಲ್ಲಿ ಕಾಣಿಸಿಕೊಳ್ಳದಿದ್ದರೂ, ಮೌನವಾಗಿ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುತ್ತಾರೆ.ಬಹುತೇಕ ಎಲೆಮರೆಕಾಯಿಗಳಂತೆ ಮರೆಯಾಗಿಬಿಡುತ್ತಾರೆ.
ಸಾಧನೆ ಮಾಡಿದವರಿಗೆ ಕೇವಲ ಪ್ರಶಸ್ತಿಯೇ ಮುಖ್ಯವಲ್ಲ; ಗುರುತಿಸುವ ಮನಸ್ಸು ಮುಖ್ಯ. ಒಬ್ಬ ವ್ಯಕ್ತಿಯ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ, ಸಮಾಜಕ್ಕೆ ಪರಿಚಯಿಸುವುದೇ ನಿಜವಾದ ಸಾಮಾಜಿಕ ಕರ್ತವ್ಯ. ಒಂದು ಸುದ್ದಿ, ಒಂದು ಮಾತು, ಒಂದು ವೇದಿಕೆ—ಇವುಗಳು ಒಬ್ಬ ಸಾಧಕನ ಜೀವನದಲ್ಲಿ ದೊಡ್ಡ ಬದಲಾವಣೆ ತರಬಲ್ಲವು.ಇಂದು ನಾವು ಗಮನಿಸದ ಪ್ರತಿಭೆಯೇ ನಾಳೆ ದೇಶದ ಮಟ್ಟದಲ್ಲಿ ಮೆರೆಯಬಹುದು. ಅದಕ್ಕಾಗಿ ಸಾಧಕರನ್ನು ಹುಡುಕುವ ಸಂಸ್ಕೃತಿ ನಮ್ಮಲ್ಲಿ ಬೆಳೆಬೇಕು. ಗ್ರಾಮ, ತಾಲೂಕು, ಜಿಲ್ಲೆ ಎಲ್ಲೆಡೆಯಲ್ಲೂ ಸಾಧಕರು ಇದ್ದಾರೆ; ಅವರಿಗೆ ಬೆಳಕು ಕೊಡುವ ಜವಾಬ್ದಾರಿ ನಮ್ಮದೆ.ಎಲೆಮರೆಕಾಯಿಗಳಂತೆ ಇರುವವರನ್ನು ಮರೆಯಾಗಲು ಬಿಡದೆ,ಅವರ ಸಾಧನೆ ಸಮಾಜದ ಮುಂದೆ ಮೆರೆಯುವಂತೆ ಮಾಡೋಣ.ಇದರಿಂದಲೇ ಆರೋಗ್ಯಕರ, ಪ್ರೇರಣಾದಾಯಕ ಸಮಾಜ ನಿರ್ಮಾಣ ಸಾಧ್ಯ.
“ನಾಡಿ ನ್ಯೂಸ್ – ಮೌನದೊಳಗಿನ ನಾಡಿ ಮಿಡಿತ.”












Leave a Reply