ಹೊಸನಗರ: ಪಟ್ಟಣದ ಅಖಿಲ ಭಾರತ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ 8ನೇ ವರ್ಷದ ಗಣಪತಿ ಮೂರ್ತಿಯ ವಿಸರ್ಜನಾ ಶೋಭಾಯಾತ್ರೆ ಸೋಮವಾರ ಸಂಜೆ ಅತ್ಯಂತ ವಿಜೃಂಭಣೆ ಹಾಗೂ ಸಡಗರದಿಂದ ನಡೆಯಿತು.
ಪಟ್ಟಣದ ಅಂಚೆ ಕಚೇರಿ ಸಮೀಪದ ವೀರ ಸಾವರ್ಕರ್ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ದ್ಯಾವರ್ಸ, ನೆಹರು ರಸ್ತೆ, ಕೋರ್ಟ್ ಸರ್ಕಲ್, ಚೌಡಮ್ಮ ರಸ್ತೆ, ಕಾಳಿಕಾಪುರ ರಸ್ತೆ ಸೇರಿದಂತೆ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು.
ಶೋಭಾಯಾತ್ರೆಯಲ್ಲಿ ಡೊಳ್ಳು ಕುಣಿತ, ಚಂಡೆ ವಾದನ, ವಿವಿಧ ಬಗೆಯ ಗೊಂಬೆಗಳು ಹಾಗೂ ಆಕರ್ಷಕ ಸ್ಥಬ್ಧಚಿತ್ರಗಳ ಪ್ರದರ್ಶನ ಗಮನ ಸೆಳೆಯಿತು. ಪಟ್ಟಣದ ಪ್ರಮುಖ ಬೀದಿಗಳು ಕೇಸರಿ ಧ್ವಜಗಳಿಂದ ಕಂಗೊಳಿಸಿದವು. ಯುವಕರು ಹಾಗೂ ಮಹಿಳೆಯರು ಡಿಜೆ ಮತ್ತು ಮಂಗಳ ವಾದ್ಯಗಳ ತಾಳಕ್ಕೆ ಉತ್ಸಾಹದಿಂದ ಹೆಜ್ಜೆ ಹಾಕಿದರು.
ಸತತ 14 ಗಂಟೆಗಳ ಕಾಲ ರಾತ್ರಿಯಿಡೀ ಸಾಗಿದ ಶೋಭಾಯಾತ್ರೆ ಮಂಗಳವಾರ ಮುಂಜಾನೆ ಗಣಪತಿ ದೇವಸ್ಥಾನದ ಪುಷ್ಕರಣಿ ತಲುಪಿತು. ಬಳಿಕ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಭಕ್ತರ ಜಯಘೋಷಗಳ ನಡುವೆ ಮಹಾಗಣಪತಿ ಮೂರ್ತಿಯನ್ನು ಪುಷ್ಕರಣಿಯಲ್ಲಿ ಶಾಸ್ತ್ರೋಕ್ತವಾಗಿ ವಿಸರ್ಜಿಸಲಾಯಿತು.

ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿದ್ದು, ಶೋಭಾಯಾತ್ರೆ ಶಾಂತಿಯುತವಾಗಿ ಸಂಪನ್ನಗೊಂಡಿತು.
















Leave a Reply