30 ಪಂಚಾಯಿತಿ 17 ಹಿಂದೂ ಸಂಗಮ ಕಾರ್ಯಕ್ರಮ | ಸಾವಿರಾರು ಹಿಂದೂಗಳ ಸಮಾಗಮ
ರಿಪ್ಪನ್ ಪೇಟೆ: ಹಿಂದೂ ಸಂಗಮ ಆಯೋಜನಾ ಸಮಿತಿಯ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ವಿನಯ್ ಶೆಟ್ಟಿ ಹಿಂದೂ ಸಮಾಜದ ಸಂಘಟನೆ, ಸ್ವಾವಲಂಬಿ, ಸಂಸ್ಕಾರಯುಕ್ತ ಮತ್ತು ಸಾಮರಸ್ಯಯುಕ್ತ ಸಮಾಜವನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ನಿರತವಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷಗಳು ತುಂಬಿರುವ ಸಂದರ್ಭದಲ್ಲಿ ಹಿಂದೂ ಸಮಾಜವೇ ಒಟ್ಟುಗೂಡಿ ಹಿಂದೂ ಸಂಗಮ ಕಾರ್ಯಕ್ರಮಗಳನ್ನು ಪಂಚಾಯಿತಿ ಮಟ್ಟದಲ್ಲಿ ಆಯೋಜಿಸುತ್ತಿದೆ.

ಪಟ್ಟಣದ ಆರ್.ಎಸ್.ಎಸ್ ಕಾರ್ಯಾಲಯ ಪಾಂಚಜನ್ಯದಲ್ಲಿ ಹಿಂದೂ ಸಂಗಮ ಆಯೋಜನ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.
ಹೊಸನಗರ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿಯು, ತಾಲೂಕಿನ 30 ಪಂಚಾಯಿತಿಗಳು ಪ್ರತಿನಿಧಿಸುವಂತೆ ಆಯ್ದ 17 ಸ್ಥಳಗಳಲ್ಲಿ ಹಿಂದೂ ಸಂಗಮಗಳನ್ನು ಜನವರಿ 22 ರಿಂದ ಫೆಬ್ರವರಿ 8 ರವರೆಗೆ ವಿವಿಧ ದಿನಗಳಂದು ಆಯೋಜಿಸುತ್ತಿದೆ ಎಂದು ಮಾಹಿತಿ ನೀಡಿದರು.
ನಮ್ಮ ದೇವಾಲಯಗಳು ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸುವುದಲ್ಲದೇ ನಮ್ಮ ಧರ್ಮ, ಸಂಸ್ಕೃತಿ, ಮೌಲ್ಯಗಳನ್ನು ಆಚರಣೆಗೆ ತರುವಲ್ಲಿ ಜಾಗೃತಿಯ, ಶಕ್ತಿಯ ಕೇಂದ್ರವಾಗಬೇಕು. ವ್ಯಕ್ತಿಯು ತನ್ನ, ಕುಟುಂಬದ ಮತ್ತು ಸಮಾಜದ ನಡವಳಿಕೆಯಲ್ಲಿ ಪರಿವರ್ತನೆಯನ್ನು ತರುವಲ್ಲಿ ಜವಾಬ್ದಾರಿಯ ಪಾತ್ರವನ್ನು ನಿರ್ವಹಿಸಬೇಕು.

ಕುಟುಂಬದಲ್ಲಿ ಸಂಸ್ಕೃತಿ, ಸಂಸ್ಕಾರಗಳ ಸಂವರ್ಧನೆ, ಪರಿಸರದ ಬಗ್ಗೆ ಕಾಳಜಿ, ಸ್ವದೇಶಿ ವಸ್ತುಗಳ ಬಳಕೆ ಮತ್ತು ಜೀವನ ಪದ್ಧತಿಯ ವಿಕಾಸ, ಸಮಾಜದ ಎಲ್ಲರೊಂದಿಗೆ ಸಾಮರಸ್ಯದ ಭಾವ, ನಾಗರೀಕ ಕರ್ತವ್ಯಗಳನ್ನು ನಿತ್ಯ ಪಾಲಿಸುವುದು; ಈ ಪಂಚ ಪರಿವರ್ತನೆಯ ಅಂಶಗಳು ಸಮಾಜದಲ್ಲಿ ಅರಳಬೇಕು. ಪ್ರತಿ ವ್ಯಕ್ತಿಯೂ ತನ್ನ ಮನೆ, ವೃತ್ತಿಯ ಕ್ಷೇತ್ರ, ಸಮಾಜದಲ್ಲಿ ಮೇಲ್ಕಂಡ ಅಂಶಗಳನ್ನು ಅಳವಡಿಸಿಕೊಳ್ಳುವ ವಾತಾವರಣ ನಿರ್ಮಾಣವಾಗುವ ಮಹತ್ತರ ಉದ್ದೇಶವನ್ನೂ ಹಿಂದೂ ಸಂಗಮವು ಹೊಂದಿದೆ ಎಂದು ಹೇಳಿದರು.
ತದನಂತರ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ಮೂಗುಡ್ತಿ ಪಂಚಾಯ್ತಿ ಮಟ್ಟದಲ್ಲಿ ಸಂಘಟಿಸಿ ಹಿಂದೂ ಧರ್ಮ, ಸಂಸ್ಕೃತಿಗಳ ಸಂರಕ್ಷಣೆ, ಸ್ವಾವಲಂಬನೆ ಮತ್ತು ಸಮಗ್ರ ವಿಕಾಸದ ದೃಷ್ಟಿಯಿಂದ ಜಾಗೃತ ಹಿಂದೂ ಸಮಾಜ ಕಟಿಬದ್ಧವಾಗಬೇಕು ಎಂಬ ಆಶಯದೊಂದಿಗೆ ಹಿಂದೂ ಸಮಾಜದ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ.ಎಲ್ಲಾ ಹಿಂದೂ ಬಾಂಧವರು ಈ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಬೇಕು. ತನ್ಮೂಲಕ ಸಮಾಜದ ಜಾಗೃತಿಯ ಈ ಕಾರ್ಯಕ್ರಮದಲ್ಲಿ ತಮ್ಮ ಪಾತ್ರವನ್ನು ಅರಿತುಕೊಳ್ಳಬೇಕು ಎಂದು ಸಮಿತಿಯ ಪರವಾಗಿ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಚಿದಂಬರರಾವ್ ಕೋಡೂರು, ಧನ್ಯಶ್ರೀ ರಮೇಶ್, ಎನ್ ಆರ್ ದೇವಾನಂದ, ಧರ್ಮೇದ್ರ ಕೊಳವಂಕ , ನಿವೃತ್ತ ಮಹಿಳಾ ಸೈನಿಕರಾದ ಪದ್ಮ ,ಪೂರ್ಣಿಮಾ ಕಿಣಿ,ಅನಂತಮೂರ್ತಿ,ಸೋಮಶೇಖರ್, ಕೋಟೇಶ್ ಯಡೂರು,ನಾರಾಯಣ ಕಾಮತ್, ವಸಂತ್ ಬೆಳ್ಳೂರು ,ಕುಶಾಲ್, ಹರೀಶ್ ಮತ್ತಿತರರಿದ್ದರು.














Leave a Reply