ಗರ್ತಿಕೆರೆ: ವ್ಯಕ್ತಿಯೊಬ್ಬನ ಮೇಲೆ ಕಬ್ಬಿಣದ ರಾಡ್ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಬಳಿಕ ಗಾಯಗೊಂಡ ವ್ಯಕ್ತಿಯ ತಲೆಯ ಮೇಲೆ ಕಾಲಿಟ್ಟು ಅಟ್ಟಹಾಸ ಮೆರೆದಿರುವ ಆರೋಪ ಕೇಳಿಬಂದಿರುವ ಘಟನೆ ಗರ್ತಿಕೆರೆ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಘಟನೆಯ ದೃಶ್ಯಾವಳಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಗರ್ತಿಕೆರೆ ಗ್ರಾಮದ ರಾಘವೇಂದ್ರ ಅಲಿಯಾಸ್ ಆಪಲ್ ರಾಘು ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ಮಂಜುನಾಥ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಆರೋಪಿ ರಾಘು ಮನೆಯಲ್ಲಿ ಮದ್ಯ ಸೇವಿಸಿದ ಬಳಿಕ ಗರ್ತಿಕೆರೆಯ ಅವುಕ ಸರ್ಕಲ್ಗೆ ಬಂದಿದ್ದ ಎನ್ನಲಾಗಿದ್ದು, ಅಲ್ಲಿ ತನ್ನೊಂದಿಗೆ ಮದ್ಯ ಸೇವಿಸಿದ್ದ ಮಂಜುನಾಥ್ ಅವರೊಂದಿಗೆ ಏಕಾಏಕಿ ಗಲಾಟೆ ಆರಂಭವಾಗಿದೆ ಎನ್ನಲಾಗಿದೆ. ಮಾತಿನ ಚಕಮಕಿ ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಕಬ್ಬಿಣದ ರಾಡ್ನಿಂದ ಮಂಜುನಾಥ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಹಲ್ಲೆಯಿಂದ ಮಂಜುನಾಥ್ ನೆಲಕ್ಕೆ ಬಿದ್ದ ಬಳಿಕ ಅವರ ತಲೆಯ ಮೇಲೆ ಆರೋಪಿ ಕಾಲಿಟ್ಟಿರುವ ದೃಶ್ಯವೂ ವೈರಲ್ ಆಗಿರುವ ವಿಡಿಯೋದಲ್ಲಿ ಕಂಡುಬಂದಿದೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಹಿನ್ನೆಲೆ, ಹಲ್ಲೆಗೆ ನಿಖರ ಕಾರಣ ಹಾಗೂ ಘಟನೆಯ ಸಂದರ್ಭದಲ್ಲಿ ನಡೆದಿರುವ ಬೆಳವಣಿಗೆಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

















Leave a Reply