ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವಿದೆ ಎಂದು ಡೆತ್ ನೋಟ್ ಬರೆದಿಟ್ಟು ಯುವ ಸ್ಪರ್ಧಾರ್ಥಿಯೊಬ್ಬರು ಆತ್ಮಹತ್ಯೆ
ಸೊರಬ: ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವಿದೆ ಎಂದು ಡೆತ್ ನೋಟ್ ಬರೆದಿಟ್ಟು ಯುವ ಸ್ಪರ್ಧಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳಿವಿ ಹೋಬಳಿಯ ಕೈಸೋಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮೃತರನ್ನು ಕೈಸೋಡಿ ಗ್ರಾಮದ ಉಮೇಶ್–ಗೀತಾ ದಂಪತಿಗಳ ಕಿರಿಯ ಪುತ್ರ ರಾಕೇಶ್ (21) ಎಂದು ಗುರುತಿಸಲಾಗಿದೆ. ಅವರು ಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025ನೇ ಸಾಲಿನಲ್ಲಿ ಬಿ.ಎ ಪದವಿಯನ್ನು ಪೂರ್ಣಗೊಳಿಸಿದ್ದರು. ಸರ್ಕಾರಿ ಉದ್ಯೋಗದ ಕನಸಿನೊಂದಿಗೆ ರಾಮನಗರದ ಜಾಲಪ್ಪ ಅಕಾಡೆಮಿಯಲ್ಲಿ ನಾಲ್ಕು ತಿಂಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿ, ಸುಮಾರು ಒಂದು ತಿಂಗಳ ಹಿಂದೆ ಮನೆಗೆ ವಾಪಸಾಗಿದ್ದರು ಎಂದು ತಿಳಿದು ಬಂದಿದೆ.
ರಾಕೇಶ್ ಇತ್ತೀಚಿನ ದಿನಗಳಲ್ಲಿ ಮೌನವಾಗಿದ್ದು, ಸ್ನೇಹಿತರೊಂದಿಗೆ ಹೆಚ್ಚು ಸಂವಹನ ನಡೆಸುತ್ತಿರಲಿಲ್ಲ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರಿಗೆ ಇಬ್ಬರು ಅಕ್ಕಂದಿರು ಇದ್ದು, ಒಬ್ಬರಿಗೆ ವಿವಾಹವಾಗಿದೆ.
ಘಟನೆಯ ವಿಷಯ ತಿಳಿದ ಕುಟುಂಬಸ್ಥರು ಅಂತ್ಯಕ್ರಿಯೆಗೆ ಮುಂದಾಗಿದ್ದಾಗ, ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಕ್ರಮಕೈಗೊಂಡು, ಮರಣೋತ್ತರ ಪರೀಕ್ಷೆಯ ಬಳಿಕ ಪಾರ್ಥೀವ ಶರೀರವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಸೊರಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಡೆತ್ ನೋಟ್‌ನಲ್ಲಿ ಉಲ್ಲೇಖ:-
ರಾಕೇಶ್ ಬರೆದಿರುವ ಡೆತ್ ನೋಟ್‌ನಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಸಾಮರ್ಥ್ಯವನ್ನು ಚಿಕ್ಕ ವಯಸ್ಸಿನಲ್ಲೇ ಗುರುತಿಸಿ ಬೆಂಬಲಿಸಬೇಕು, ಎಲ್ಲ ಮಕ್ಕಳನ್ನೂ ಒಂದೇ ರೀತಿಯ ಉದ್ಯೋಗ ಗುರಿಗೆ ಒತ್ತಾಯಿಸಬಾರದು ಎಂದು ಮನವಿ ಮಾಡಿದ್ದಾರೆ. ಆನ್‌ಲೈನ್ ಮೆಂಟಲ್ ಸಪೋರ್ಟ್ ಬಗ್ಗೆ ಎಚ್ಚರಿಕೆ ನೀಡಿರುವ ಅವರು, ತಮ್ಮ ಸಂದೇಶದಿಂದ ಸಮಾಜದಲ್ಲಿ ಬದಲಾವಣೆ ಆಗಬೇಕು ಎಂದು ಆಶಿಸಿದ್ದಾರೆ.















Leave a Reply