ವಿಶೇಷ ವರದಿ: ಎನ್.ಕಾರ್ತಿಕ್ ಕೌಂಡಿನ್ಯ ✒️
ಅರಸಾಳು: ಗ್ರಾಂ.ಪಂಚಾಯತಿ ವ್ಯಾಪ್ತಿಯಲ್ಲಿರುವ ಮಾಣಿಕೆರೆ ರಸ್ತೆಯಲ್ಲಿ ತಮ್ಮ ಸ್ವಂತ ಜಮೀನಿನಲ್ಲಿ ವೇಲಾಯುಧನ್ ಮತ್ತು ಮಗ ಸುರೇಶ್ ಎಂಬುವವರು 30 ವರ್ಷಗಳಿಂದ ಚಿಕ್ಕ ಗುಡಿಸಿಲಿನಲ್ಲಿ ವಾಸವಾಗಿದ್ದಾರೆ.

30 ವರ್ಷಗಳ ಹಿಂದೆ ಒಬ್ಬರಿಂದ ಜಾಗವನ್ನು ಖರೀದಿಸಿ ವಾಸವಿದ್ದು, ಜೀವನಕ್ಕಾಗಿ ಕುರಿ ಸಾಕಾಣಿಕೆಯನ್ನು ಮಾಡುತ್ತಿದ್ದಾರೆ ತಮ್ಮ ಎರಡು ಎಕರೆ ಜಮೀನಿನಲ್ಲಿ ನೀರಿಲ್ಲದ ಕಾರಣ ಕೃಷಿಯನ್ನು ಮಾಡಲಾಗದೆ ಚಿಕ್ಕ ಗುಡಿಸಿಲಿನಲ್ಲಿ ಕಗ್ಗತ್ತಲ ಬದುಕನ್ನು ನಡೆಸುತ್ತಿದ್ದಾರೆ.ಅವರಿಗೆ ಗ್ರಾಂ.ಪಂಚಾಯತಿ ಯಿಂದ ಈ ತನಕ ಮನೆ ಡಿಮ್ಯಾಂಡ್ ಪತ್ರವನ್ನು ಕೊಡಲು ಸಾಧ್ಯವಾಗಿಲ್ಲ, ಅನೇಕ ಬಾರಿ ಇವರು ಅರ್ಜಿ ಸಲ್ಲಿಸಿಯೂ ಇವರಿಗೆ ಪಂಚಾಯತಿ ಯಿಂದ ಮೂಲಸೌಕರ್ಯ ವ್ಯವಸ್ಥೆ ಆಗಿರುವುದಿಲ್ಲ.ಮನೆಯಿಲ್ಲದೆ ಒಂದು ಗುಡಿಸಿಲಿನಲ್ಲಿ ಕುಡಿಯಲು ನೀರಿಲ್ಲದೆ, ಮನೆಗೆ ವಿದ್ಯುತ್ ಇಲ್ಲದೇ ಅವರದ್ದೇ ಆದ ಒಂದು ಪ್ರಪಂಚದಲ್ಲಿ ಜೀವಿಸುತ್ತಿದ್ದಾರೆ.
ಯಾವುದೇ ಸರಕಾರದ ಫಲಾನುಭವಿಯಾಗದೆ ವಂಚಿತರಾಗಿದ್ದಾರೆ. ವಯೋ ಸಹಜವಾಗಿ ಅವರಿಗೆ ಓಡಾಡಲು ಸಮಸ್ಯೆಗಳು ಮತ್ತು ಅಕ್ಷಸ್ಥರಲ್ಲದೆಯೋ ಇರಬಹುದು ಆ ಕಾರಣ ಸರ್ಕಾರ ಸವಲತ್ತು ಕೇಳದೆ ಇದ್ದಿರಬಹುದು! ಆದರೆ ಗ್ರಾಮ ಪಂಚಾಯತಿ ಎಲ್ಲರಿಗೂ ಯೋಜನೆಗಳನ್ನು ತಲುಪಿಸಬೇಕಾದವರು ಅಲ್ಲವೇ ? ಪ್ರತಿ ಮನೆಗೆ ನೀರು,ವಿದ್ಯುತ್,ಎಲ್ಲರಿಗೂ ಮನೆ ಎಂಬ ಯೋಜನೆಯಲ್ಲಿ ಓಮ್ಮೆ ಆಶ್ರಯ ಯೋಜನೆಯಲ್ಲಿ ಮನೆ ಬಿಡುಗಡೆಯಾಗಿತ್ತಾದ್ದರೂ ಅದನ್ನು ಪಡೆಯುವಲ್ಲಿ ಇವರು ವಿಫಲರಾಗಿದ್ದರು.
ಅರಸಾಳು ಗ್ರಾಮ ಪಂಚಾಯತಿ ಯಿಂದ ಮನೆಗೆ ಡಿಮ್ಯಾಂಡ್ ಕೊಡಲು ತಾಂತ್ರಿಕ ಕಾರಣಗಳೂ ಅಡ್ಡ ಬಂದಿದ್ದವು. ಮಲೆನಾಡಿನ ಭಾಗದಲ್ಲಿ ಬಗರ್ ಹುಕಂ ಸಮಸ್ಯೆ ಇವತ್ತು ನಿನ್ನೆಯದಲ್ಲ,ಈ ಭಾಗದ ಜನರ ಸಮಸ್ಯೆ ಅದು; ವೇಲಾಯುಧನ್ ಅವರಿಗೆ ಖಾತೆ ಜಮೀನು ಇದ್ದು ನ್ಯಾಯಾಲಯದಲ್ಲಿ ವ್ಯಾಜ್ಯವಿರುವ ಕಾರಣ ಕೆಲವು ಗೊಂದಲ, ತಾಂತ್ರಿಕ ದೋಷಕ್ಕೆ ಕಾರಣವಾಗಿತ್ತು. ಹಾಗೇಂದ ಮಾತ್ರಕ್ಕೆ ಒಬ್ಬ ನಾಗರಿಕ ಮೂಲಭೂತ ಸೌಕರ್ಯ ದಿಂದ ವಂಚಿತನಾಗುವುದು ಎಷ್ಟರ ಮಟ್ಟಿಗೆ ಸರಿ. ಸ್ವಾತಂತ್ರ್ಯ ಬಂದು 78 ವರ್ಷ ಆದರೂ ಮನೆ, ಕುಡಿಯಲು ನೀರು,ವಿದ್ಯುತ್ ಸಿಗದೇ ಇರುವುದು ಸಂವಿಧಾನದ ಮೂಲ ಆಶಯಗಳಿಗೆ ತೋರಿದ ಅಗೌರವ ಎಂದು ಹೇಳಿದರೂ ತಪ್ಪಾಗಲಾರದು.
ಸರ್ಕಾರದ ಯಾವುದೇ ಯೋಜನೆಯೂ ಸಿಗಲಿಲ್ಲ !!
ಕುಡಿಯುವ ನೀರಿನ ಯೋಜನೆಗಳು: ರಾಜೀವ್ ಗಾಂಧಿ ರಾಷ್ಟ್ರೀಯ ಕುಡಿಯುವ ನೀರಿನ ಯೋಜನೆಯ ಫಲವು ಸಿಗಲಿಲ್ಲ . 2009ರ ಪ್ರಧಾನಿ ಮನಮೋಹನ್ ಸಿಂಗ್ ಅವರ NRDWP ಯೋಜನೆಯಲ್ಲಿ ಪ್ರತಿ ಗ್ರಾಮಕ್ಕೂ ಕುಡಿಯುವ ನೀರು ಈ ಯೋಜನೆಯಲ್ಲೂ ಇವರು ಫಲಾನುಭವಿಯಾಗಲು ಸಾಧ್ಯವಾಗಿಲ್ಲ .ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ” ಜಲ ಜೀವನ ಮಿಷನ್ ” ಪ್ರತಿ ಮನೆಗೂ ನೀರು ಯೋಜನೆ ಹಳ್ಳ ಹಿಡಿದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಪ್ರತಿ ಮನೆಗೂ ಕರೆಂಟ್ ಯೋಜನೆ: ಪ್ರತಿಯೊಬ್ಬ ಪ್ರಜೆಯ ಮನೆಗೆ 2005 ರಲ್ಲಿ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆ ಮತ್ತು ಪ್ರಧಾನಿ ಮೋದಿ ಅವರ ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ- 2015 ಈ ಯಾವುದೇ ಯೋಜನೆಯ ಫಲಾನುಭವಿಯಾಗಲು ವಿಫಲರಾಗಿದ್ದಾರೆ.

ಸರ್ಕಾರದ ನಿಯಮಾವಳಿಗಳಂತೆ ಆಡಳಿತ ವ್ಯವಸ್ಥೆ ನಡೆಸಲಾಗುತ್ತದೆ. ಇವರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಕೆಲವು ತಾಂತ್ರಿಕ ದೋಷಗಳಿದೆ ಅದೆಲ್ಲವೂ ಸರಿಯಾದಾಗ ನಾವು ಪ್ರಯತ್ನ ಮಾಡಬಹುದು ಎಂದು ಪಂಚಾಯಿತಿ ಅಧಿಕಾರಿಗಳು ತಿಳಿಸಿರುತ್ತಾರೆ.
ಗ್ರಾಮ ಪಂಚಾಯತಿ ಸದಸ್ಯರ ಸ್ಪಷ್ಟನೆ:
“ನಮ್ಮ ಕಡೆಯಿಂದ ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿದೆ. ಆದರೆ ಫಲಾನುಭವಿಯಾಗಲು ಅಗತ್ಯವಿರುವ ದಾಖಲೆಗಳ ಕೊರತೆ ಹಾಗೂ ಕೆಲವು ತಾಂತ್ರಿಕ ದೋಷಗಳು ಎದುರಾದ ಕಾರಣ ಸಮಸ್ಯೆ ಉಂಟಾಗಿದೆ. ಆಶ್ರಯ ಮನೆ ಮಂಜೂರಾದ ಸಮಯದಲ್ಲಿ ಸಂಬಂಧಿಸಿದ ಕುಟುಂಬವು ಆರ್ಥಿಕ ಅಡಚಣೆಗಳಿಂದಾಗಿ ಅದನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಯೋಜನೆಯ ಲಾಭ ಅವರಿಗೆ ತಲುಪಲು ವಿಳಂಬವಾಗಿದೆ” ಎಂದು ಗ್ರಾಮ ಪಂಚಾಯತಿ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಫಲಾನುಭವಿಗಳಿಗೆ ತಲುಪಿಸುವಲ್ಲಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡರೂ ಅದರೊಂದಿಗೆ ತಾಂತ್ರಿಕ ದೋಷದ ಕಾರಣ ದಿಂದ ಮೂಲ ಸೌಕರ್ಯಗಳು ಸಿಗದಿರುವುದು ಅನಿಚ್ಛಿತ ಪರಿಸ್ಥಿತಿ. ಈ ಕೂಡಲೇ ಗ್ರಾಂ.ಪಂಚಾಯತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು , ಮಾನ್ಯ ಶಾಸಕರು , ಮಾನ್ಯ ಸಂಸದರು ಗಂಭೀರವಾಗಿ ಪರಿಗಣಿಸಿ ಈ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಈ ಕುಟುಂಬಕ್ಕೆ ಮೂಲ ಸೌಕರ್ಯ ಒದಗಿಸಬೇಕೆಂಬುವುದೇ ನಮ್ಮ ಕಳಕಳಿ.
















Leave a Reply