ನವರಾತ್ರಿ ಹಬ್ಬದ ಒಂಬತ್ತನೇ ದಿನವನ್ನು ಮಹಾನವಮಿಯಾಗಿ ಆಚರಿಸಲಾಗುತ್ತದೆ. ಈ ಪವಿತ್ರ ದಿನದಂದು ದುರ್ಗಾದೇವಿಯ ಒಂಬತ್ತನೇ ಸ್ವರೂಪವಾದ ಶ್ರೀ ಸಿದ್ಧಿದಾತ್ರಿ ದೇವಿಯನ್ನು ಭಕ್ತಿಯಿಂದ ಆರಾಧಿಸಲಾಗುತ್ತದೆ. ಭಕ್ತರಿಗೆ ಸಿದ್ಧಿ, ಜ್ಞಾನ, ಶಕ್ತಿ ಹಾಗೂ ಸಮೃದ್ಧಿಯನ್ನು ಕರುಣಿಸುವ ದೇವಿಯಾಗಿ ಸಿದ್ಧಿಧಾತ್ರಿ ದೇವಿ ಪ್ರಸಿದ್ಧಳಾಗಿದ್ದಾಳೆ.
ಸಿದ್ಧಿದಾತ್ರಿ ಎಂಬ ಹೆಸರಿನಲ್ಲಿ ‘ಸಿದ್ಧಿ’ ಎಂದರೆ ಸಾಧನೆ ಅಥವಾ ವಿಶೇಷ ಶಕ್ತಿ, ‘ಧಾತ್ರಿ’ ಎಂದರೆ ನೀಡುವವಳು ಎಂಬ ಅರ್ಥವಿದೆ. ಹೀಗಾಗಿ ಸಿದ್ಧಿದಾತ್ರಿ ದೇವಿಯು ಭಕ್ತರ ಜೀವನದಲ್ಲಿ ಯಶಸ್ಸು, ಜ್ಞಾನ, ವಿವೇಕ ಹಾಗೂ ಆಧ್ಯಾತ್ಮಿಕ ಉನ್ನತಿಯನ್ನು ಕರುಣಿಸುವ ದೇವಿ ಎಂದು ಹಿಂದೂ ಧಾರ್ಮಿಕ ಪರಂಪರೆಯಲ್ಲಿ ನಂಬಲಾಗಿದೆ.
ಪುರಾಣಗಳ ಪ್ರಕಾರ, ಸಿದ್ಧಿಧಾತ್ರಿ ದೇವಿಯು ಕಮಲದ ಮೇಲೆ ಆಸೀನಳಾಗಿ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಕಮಲವನ್ನು ಧರಿಸಿರುವ ದಿವ್ಯ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ದೇವಿಯ ಈ ರೂಪವು ಶಕ್ತಿ, ಧರ್ಮ, ಜ್ಞಾನ ಮತ್ತು ಸಾತ್ವಿಕತೆಯ ಸಂಕೇತವಾಗಿದೆ. ದೇವತೆಗಳಿಗೂ ಸಿದ್ಧಿಗಳನ್ನು ಅನುಗ್ರಹಿಸಿದ ಮಹಾಶಕ್ತಿಯಾಗಿ ಸಿದ್ಧಿದಾತ್ರಿ ದೇವಿಯನ್ನು ವರ್ಣಿಸಲಾಗಿದೆ.
ನವರಾತ್ರಿಯ ಒಂಬತ್ತು ದಿನಗಳ ಆರಾಧನೆಯು ಮಹಾನವಮಿಯಂದು ವಿಶೇಷ ಮಹತ್ವವನ್ನು ಪಡೆಯುತ್ತದೆ. ಈ ದಿನ ಭಕ್ತರು ಮನೆಗಳಲ್ಲಿ ಹಾಗೂ ದೇವಾಲಯಗಳಲ್ಲಿ ವಿಶೇಷ ಪೂಜೆ, ಅರ್ಚನೆ, ಹೋಮ-ಹವನಗಳನ್ನು ನೆರವೇರಿಸುತ್ತಾರೆ. ದೇವಿಗೆ ಹೂವು, ಹಣ್ಣು ಹಾಗೂ ಸಿಹಿ ತಿನಿಸುಗಳನ್ನು ಸಮರ್ಪಿಸಿ ಕುಟುಂಬದ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಅನೇಕ ಕಡೆಗಳಲ್ಲಿ ಕನ್ಯಾಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಪ್ರದಾಯದಂತೆ ಆಚರಿಸಲಾಗುತ್ತದೆ.
ಸಿದ್ಧಿಧಾತ್ರಿ ದೇವಿಯ ಆರಾಧನೆಯು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಜೀವನದಲ್ಲಿ ಜ್ಞಾನ, ಆತ್ಮವಿಶ್ವಾಸ, ತಾಳ್ಮೆ ಮತ್ತು ಸತ್ಕಾರ್ಯಗಳ ಮಹತ್ವವನ್ನು ಸಾರುತ್ತದೆ. ಮಾನವನು ತನ್ನಲ್ಲಿರುವ ಅಜ್ಞಾನವನ್ನು ದೂರಮಾಡಿಕೊಂಡು ಸತ್ಯದ ಹಾದಿಯಲ್ಲಿ ಸಾಗಬೇಕು. ಪರಿಶ್ರಮ, ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳ ಮೂಲಕ ಜೀವನದಲ್ಲಿ ಉನ್ನತಿಯನ್ನು ಸಾಧಿಸಬೇಕು ಎಂಬ ಸಂದೇಶವನ್ನು ದೇವಿಯ ಆರಾಧನೆ ನೀಡುತ್ತದೆ.
ನವರಾತ್ರಿಯ ಒಂಬತ್ತು ದಿನಗಳ ಪೂಜೆಯು ದುರ್ಗಾದೇವಿಯ ವಿವಿಧ ಶಕ್ತಿಸ್ವರೂಪಗಳನ್ನು ಸ್ಮರಿಸುವ ಪವಿತ್ರ ಆಚರಣೆಯಾಗಿದೆ. ಮಹಾನವಮಿಯಂದು ಸಿದ್ಧಿದಾತ್ರಿ ದೇವಿಯನ್ನು ಭಕ್ತಿಯಿಂದ ಆರಾಧಿಸುವ ಮೂಲಕ ದುಷ್ಟಶಕ್ತಿಗಳ ನಿವಾರಣೆ, ಸನ್ಮಾರ್ಗದ ಅನುಸರಣೆ ಮತ್ತು ಲೋಕಕಲ್ಯಾಣಕ್ಕಾಗಿ ಭಕ್ತರು ಪ್ರಾರ್ಥಿಸುತ್ತಾರೆ.
ಶ್ರೀ ಸಿದ್ಧಿಧಾತ್ರಿ ದೇವಿಯ ಕೃಪೆಯಿಂದ ಸಕಲರ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ, ಜ್ಞಾನ ಮತ್ತು ಸಮೃದ್ಧಿ ನೆಲೆಸಲಿ. ಸರ್ವರಿಗೂ ಮಹಾನವಮಿಯ ಶುಭಾಶಯಗಳು.

















Leave a Reply