ವೀಣಾಪಾಣಿ ಸ್ವರೂಪಿಣಿ ಪದ್ಮಾವತಿ ದೇವಿ ಸರ್ವರನ್ನೂ ಕರುಣಿಸಲಿ – ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ
ರಿಪ್ಪನ್ ಪೇಟೆ : ಶರನ್ನವರಾತ್ರಿ ಹಾಗೂ ವಿಜಯದಶಮಿಯ ಏಳನೇ ದಿನದ ಅಂಗವಾಗಿ ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಶ್ರೀ ಪಾರ್ಶ್ವನಾಥ ತೀರ್ಥಂಕರರು, ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ತೀರ್ಥಂಕರರು, ಶ್ರೀ ಕೂಷ್ಮಾಂಡಿನಿ ದೇವಿ ಹಾಗೂ ಶ್ರೀ ಸರಸ್ವತಿ ದೇವಿಯ ಸನ್ನಿಧಿಯಲ್ಲಿ ಭಕ್ತರು ಪೂರ್ವಪರಂಪರೆಯಂತೆ ಆಗಮೋಕ್ತ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದರು.
ಶ್ರೀ ಆದಿನಾಥ ತೀರ್ಥಂಕರರು, ಶ್ರೀ ಮಹಾವೀರ ತೀರ್ಥಂಕರರು, ಕ್ಷೇತ್ರಪಾಲ ಹಾಗೂ ನಾಗಸನ್ನಿಧಿಗಳಲ್ಲಿ ವಿಶೇಷ ಅಲಂಕಾರ ಮತ್ತು ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯ, ಉಪಸ್ಥಿತಿ ಹಾಗೂ ನೇತೃತ್ವದಲ್ಲಿ ಜಿನನಾಮ ಸ್ತೋತ್ರ ಪಠಣದೊಂದಿಗೆ ಷೋಡಶೋಪಚಾರ ಪೂಜೆ ನೆರವೇರಿತು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿಯವರು, ಶರನ್ನವರಾತ್ರಿಯನ್ನು ನಾಡಹಬ್ಬ ಹಾಗೂ ರಾಷ್ಟ್ರೀಯ ಹಬ್ಬವಾಗಿ ಆಚರಿಸುವುದು ಭಾರತೀಯ ಪ್ರಾಚೀನ ಜೈನ ಧರ್ಮ ಸಂಸ್ಕೃತಿಯ ದ್ಯೋತಕವಾಗಿದೆ” ಎಂದು ತಿಳಿಸಿದರು.
ನವಿಲಿನ ಗರಿಗಳಿಂದ ಶ್ರೀ ಪದ್ಮಾವತಿ ದೇವಿಯ ಅಲಂಕಾರವು ಶೋಭಾಯಮಾನವಾಗಿ ಕಾಣುತ್ತದೆ. ಪ್ರಕೃತಿಯ ಪ್ರಾಣಿ-ಪಕ್ಷಿಗಳನ್ನೂ ತೀರ್ಥಂಕರರು ಹಾಗೂ ಯಕ್ಷಿ ದೇವತೆಗಳ ಲಾಂಛನಗಳಾಗಿ ಜೈನ ಧರ್ಮಗ್ರಂಥಗಳು ಗುರುತಿಸಿವೆ. ಅವು ಜೀವದಯೆ ಮತ್ತು ವಾತ್ಸಲ್ಯದ ಸಂದೇಶವನ್ನು ಸಾರುತ್ತವೆ. ಸಂಗೀತ ವಾದ್ಯಗಳೂ ದೇವಿಯ ಆರಾಧನೆಯಲ್ಲಿ ಮಹತ್ವ ಪಡೆದಿದ್ದು, ಸಂಗೀತ ಮತ್ತು ನೃತ್ಯ ಸೇವೆಯ ಸಂಕೇತಗಳಾಗಿವೆ ಎಂದು ಸ್ವಾಮೀಜಿಯವರು ವಿವರಿಸಿದರು.
ಸರ್ವರಿಗೂ ಸಕಲ ಇಷ್ಟಾರ್ಥಗಳು ನೆರವೇರಲಿ ಎಂದು ಆಶೀರ್ವದಿಸಿದ ಸ್ವಾಮೀಜಿಯವರು ಶ್ರೀಫಲ ಹಾಗೂ ಮಂತ್ರಾಕ್ಷತೆಯನ್ನು ನೀಡಿದರು.
ಸೇವಾಕರ್ತರಾದ ಬೆಂಗಳೂರಿನ ಶ್ರೀಮತಿ ಚೂಡಾಮಣಿ ಮತ್ತು ಶ್ರೀ ರವಿರಾಜ್ ಜೈನ್ ಕುಟುಂಬದವರನ್ನು ಸ್ವಾಮೀಜಿಯವರು ಆಶೀರ್ವದಿಸಿದರು. ಪ್ರಾತಃಕಾಲದಲ್ಲಿ ಕುಮುದ್ವತಿ ತೀರ್ಥದಿಂದ ವಾದ್ಯಘೋಷದೊಂದಿಗೆ ಪವಿತ್ರ ಜಲವನ್ನು ಶ್ರೀಕ್ಷೇತ್ರದ ಸನ್ನಿಧಿಗೆ ತರಲಾಯಿತು.
ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಸಂಘದ ಶ್ರಾವಿಕೆಯರು ಹಾಗೂ ಊರು-ಪರವೂರಿನ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ರಾತ್ರಿ ಅಷ್ಟಾವಧಾನ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸೇವೆಗಳು ನೆರವೇರಿದವು.
















Leave a Reply