ರಿಪ್ಪನ್ಪೇಟೆ: ಧರ್ಮ ಪ್ರಚಾರದ ಮೂಲಕ ಸಮಾಜವನ್ನು ಒಗ್ಗೂಡಿಸುವುದರೊಂದಿಗೆ ಸೇವೆ ಸಲ್ಲಿಸುತ್ತಿರುವ ಆನಂದಪುರಂ ಮುರುಘಾಮಠದ ಜಗದ್ಗುರು ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿಯವರ ಕಾರ್ಯ ಅಪಾರ. ಕೇವಲ ಮಾತುಗಳಿಗಿಂತ ಸಮಾಜದ ಅಭಿವೃದ್ಧಿಗೆ ಕೈಗೊಂಡ ಕಾರ್ಯಗಳೇ ನಿಜವಾದ ಸಾಧನೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಪಟ್ಟಣದ ಶ್ರೀ ಬಸವೇಶ್ವರ ವೀರಶೈವ ಸಮಾಜ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮ ಹಾಗೂ ಜಗದ್ಗುರುಗಳ ಅಮೃತ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿ ಯಡಿಯೂರಪ್ಪ ಅವರು, ಸಾಮಾನ್ಯ ಜನರ ಪ್ರೀತಿ ಮತ್ತು ವಿಶ್ವಾಸವೇ ತಮ್ಮ ಸಾರ್ವಜನಿಕ ಜೀವನದ ಶಕ್ತಿಯಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ, ಸನ್ಮಾನ್ಯ ಯಡಿಯೂರಪ್ಪ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲಾ ಸಾಗುತ್ತಿದ್ದೇವೆ ಬಡವರು,ರೈತರು ಜನಸಾಮಾನ್ಯರಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಎಲ್ಲಾ ಜಾತಿ, ಮತ, ಪಂಥಗಳೆಲ್ಲವೂ ನಮಗೆ ಒಂದೇ ಎಂದರು.
ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಎಲ್ಲ ಸಮುದಾಯಗಳನ್ನು ಧಾರ್ಮಿಕವಾಗಿ ಸಂಘಟಿಸಿ ಸರಳ ಜೀವನದ ಮೂಲಕ ಸೇವೆ ಸಲ್ಲಿಸುತ್ತಿರುವ ಆನಂದಪುರಂ ಶ್ರೀಗಳ ಆದರ್ಶಗಳು ಸಮಾಜಕ್ಕೆ ಮಾರ್ಗದರ್ಶಿಯಾಗಿವೆ ಎಂದರು. ಯಡಿಯೂರಪ್ಪ ಅವರು ರೈತರು, ಮಠ-ಮಂದಿರಗಳ ಅಭಿವೃದ್ಧಿಗೆ ನೀಡಿದ ಕೊಡುಗೆ ಸ್ಮರಣೀಯವಾಗಿದೆ.ನಾವು ರಾಜಕಾರಣಿಗಳಾಗಿ ಕೆಲವೊಮ್ಮೆ ಬೈಯಬೇಕು ಕೆಲವೊಮ್ಮೆ ತೆಗಳಬೇಕು ಹೊಗಳಬೇಕು ಇದೆಲ್ಲ ಸಾಮಾನ್ಯ ಅದನ್ನೆಲ್ಲ ಗಂಭೀರವಾಗಿ ಪರಿಗಣಿಸಬೇಡಿ ಎಂದರು.

ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ರಾಜಕೀಯದಲ್ಲಿ ಅಧಿಕಾರ ಶಾಶ್ವತವಲ್ಲ; ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸುವುದೇ ನಿಜವಾದ ಯಶಸ್ಸು. ರೈತರ ಬದುಕಿನಲ್ಲಿ ನಗು ಮೂಡಿಸುವುದೇ ಜನಪ್ರತಿನಿಧಿಗಳ ಗುರಿಯಾಗಬೇಕು ಇದನ್ನು ನಮ್ಮ ನಾಯಕರಾದ ಯಡಿಯೂರಪ್ಪ ಅವರು ತಮ್ಮ ಜೀವನದುದ್ದಕ್ಕೂ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅಧಿಕಾರದಲ್ಲಿರುವ ಕೆಲವು ರಾಜಕಾರಣಿಗಳು ಹಿಂದೊಂದು ಮುಂದೊಂದು ಮಾತನಾಡುತ್ತಾರೆ ಇದು ಶೋಭೆ ತರುವಂತದ್ದಲ್ಲ ಮಾತುಗಾರಿಕೆ ನೇರವಾಗಿರಬೇಕು ಎಂದರು.
ಅಮೃತ ಮಹೋತ್ಸವದ ಅಂಗವಾಗಿ ಆಶೀರ್ವಚನ ನೀಡಿದ ಜಗದ್ಗುರು ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ, ರಿಪ್ಪನ್ಪೇಟೆಯ ವೀರಶೈವ ಸಮಾಜವು ಮುರುಘಾಮಠದ ರಾಜಧಾನಿಯಿದ್ದಂತೆ ಎಂದು ಬಣ್ಣಿಸಿದರು. ಕೆಳದಿ ಶಿವಪ್ಪನಾಯಕ ಹಾಗೂ ಚನ್ನಮ್ಮಾಜಿಯ ಹೋರಾಟದ ಮಲೆನಾಡಿನ ಈ ಪುಣ್ಯಭೂಮಿಯೊಂದಿಗೆ ಮಠಕ್ಕೆ ಐತಿಹಾಸಿಕ ಸಂಬಂಧವಿದೆ ಎಂದರು.
ಮೂಲಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ ಮಾತನಾಡಿ , ಇಡೀ ನಮ್ಮ ಸಮಾಜವನ್ನು ಉದ್ದರಿಸುವುದಕ್ಕಾಗಿಯೇ ಅವತರಿಸಿದ ನಮ್ಮ ಮಠಮಾನ್ಯಗಳಿಗೆ ಅಭಿವೃದ್ಧಿಯ ಸ್ಪರ್ಶ ಸಿಗಲು ಕಾರಣರಾದ ಮಾನ್ಯ ಯಡಿಯೂರಪ್ಪನವರು ಅವರ ಅಭಿವೃದ್ಧಿಯ ಮಾರ್ಗದಲ್ಲಿಯೇ ಸಾಗುತ್ತಿರುವವರು ಸಂಸದರು ರಾಘವೇಂದ್ರ ದೇಶದಲ್ಲಿಯೇ ಮೋದಿಯ ನಂತರ ನಂಬರ್ ಒನ್ ಸಂಸದರಾಗಿ ಇಂದು ಜನಸಾಮಾನ್ಯರ ಕೆಲಸ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಡಾ. ಕೆ.ಬಿ. ಕಮಲಾಕ್ಷಪ್ಪ, ಉಪಾಧ್ಯಕ್ಷ ಜಿ.ಎಂ. ದುಂಡರಾಜಪ್ಪಗೌಡ, ಎಂ.ಆರ್. ಶಾಂತವೀರಪ್ಪಗೌಡ, ಶಿವಮೊಗ್ಗ ವೀರಶೈವ ಸಮಾಜದ ಅಧ್ಯಕ್ಷ ಜ್ಯೋತಿಪ್ರಕಾಶ, ತಾಲೂಕು ಘಟಕದ ಅಧ್ಯಕ್ಷ ಎಂ.ಎಸ್. ಉಮೇಶ್, ಬಿ.ಟಿ ಮೃತ್ಯುಂಜಯ, ಡಿ ಎಸ್ ರಾಜಶಂಕರ್, ನಿರ್ದೇಶಕರಾದ ಡಿ.ಸಿ ಮುರುಗೇಶಪ್ಪ ಗೌಡ, ಡಿ.ಎಸ್ ಕರುಣೇಶ್ವರ, ಡಿ. ಈ ಮಧುಸೂದನ್, ಎಲ್. ವೈ ದಾನೇಶಪ್ಪ ಹಾಗೂ ಹಾರೋಹಿತ್ತಲು ಹೆಚ್, ಎಸ್ ರಾಜೇಶ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಚ್ಎಂ ವರ್ತೇಶ್ ಸ್ವಾಗತಿಸಿದರು ಶಿಕ್ಷಕಿ ಎಂ ಕೆ ವಾಣಿ ನಿರೂಪಿಸಿದರು,ಕೆ.ಆರ್ ರಾಜು ಪ್ರಾಸ್ತವಿಕವಾಗಿ ಮಾತನಾಡಿದರು, ಈಶ್ವರಪ್ಪ ವಂದಿಸಿದರು.
ಇದನ್ನೂ ಓದಿ:https://naadinews.com/rotary-ripponpet-nation-builder-award-teachers-honour/
















Leave a Reply