ರಿಪ್ಪನ್ ಪೇಟೆ: ಶ್ರೀಕೃಷ್ಣ ಉತ್ತಮ ಸಂದಾನಕಾರನಷ್ಟೇ ಅಲ್ಲದೆ, ಅತ್ಯುತ್ತಮ ಮೆಂಟರ್ ಆಗಿಯೂ ಕಾಣಿಸಿಕೊಂಡಿದ್ದಾನೆ. ಯುದ್ಧಭೂಮಿಯಲ್ಲಿ ಅರ್ಜುನನಿಗೆ ಧೈರ್ಯ ತುಂಬಿ, ಆತ್ಮವಿಶ್ವಾಸ ಮೂಡಿಸಿದ ಚಾಣಕ್ಯನಂತಿರುವ ಶ್ರೀಕೃಷ್ಣ ಪರಮಾತ್ಮನ ಪ್ರೇರಣೆ ಇಂದಿನ ಪೀಳಿಗೆಯ ಮಕ್ಕಳಿಗೂ ಅಗತ್ಯವಾಗಿದೆ ಎಂದು ಪತ್ರಕರ್ತ ಅರವಿಂದ ಅಕ್ಲಾಪುರ ಹೇಳಿದರು.
ಸಮೀಪದ ಗರ್ತಿಕೆರೆಯ ಮಲೆನಾಡು ವಿದ್ಯಾಕೇಂದ್ರದ ಕುಮುದ್ವತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶ್ರೀಕೃಷ್ಣವೇಷ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀಕೃಷ್ಣನ ಜೀವನ ಹಾಗೂ ಸಂದೇಶಗಳು ಮಕ್ಕಳಲ್ಲಿ ಧೈರ್ಯ, ಆತ್ಮವಿಶ್ವಾಸ ಮತ್ತು ಉತ್ತಮ ಚಿಂತನೆ ಬೆಳೆಸಲು ಪ್ರೇರಣೆಯಾಗುತ್ತವೆ. ಮಕ್ಕಳಿಗೆ ಇಂತಹ ಮೌಲ್ಯಗಳನ್ನು ಪರಿಚಯಿಸುವಲ್ಲಿ ಶಾಲೆ ಹಾಗೂ ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಅಧ್ಯಕ್ಷರು ಹಾಗೂ ವಿದ್ಯಾಭಾರತಿಯ ಜಿಲ್ಲಾ ಕಾರ್ಯದರ್ಶಿ ಹೆಚ್.ಎಂ. ರಾಘವೇಂದ್ರ ಮಾತನಾಡಿ, ಮಕ್ಕಳಿಗೆ ಶ್ರೀಕೃಷ್ಣನ ಆದರ್ಶ ಹಾಗೂ ಪ್ರೇರಣೆ ದೊರೆಯಬೇಕಾದರೆ ತಾಯಂದಿರು ಯಶೋಧೆಯಂತೆ ಮಕ್ಕಳನ್ನು ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಹಾಲು, ಮೊಸರು, ಬೆಣ್ಣೆಯಂತಹ ಗ್ರಾಮೀಣ ಬದುಕಿನ ಸರಳ ಪರಿಕಲ್ಪನೆಗಳ ಮೂಲಕವೂ ಶ್ರೀಕೃಷ್ಣನ ಜೀವನ ಸಂದೇಶಗಳು ಜನಮನ ತಲುಪಿವೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಮೌಲ್ಯಗಳ ಬಗ್ಗೆ ಅರಿವು ಮೂಡಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುದ್ದು ಮಕ್ಕಳು ವಿವಿಧ ಕೃಷ್ಣವೇಷಗಳನ್ನು ಧರಿಸಿ ಆಕರ್ಷಕ ಪ್ರದರ್ಶನ ನೀಡಿದರು. ಮಕ್ಕಳ ವೇಷಭೂಷಣ, ಅಭಿನಯ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ನೆರೆದಿದ್ದವರ ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಅರವಿಂದ ಅಕ್ಲಾಪುರ, ಹೆದ್ದೂರು ನವೀನ್ ಹಾಗೂ ಮಧುರಾ ಸೇರಿದಂತೆ ಶಾಲೆಯ ಮಾತಾಜಿಗಳು, ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
















Leave a Reply