ಆಯನೂರು: ಸಮೀಪದ ಮಂಡಗಟ್ಟದ ಗಾಳಿ ಮಾರಿ ಗದ್ದುಗೆ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಪಕ್ಕದಲ್ಲೇ ಬಿದ್ದಿರುವ ದೈತ್ಯ ವೃಕ್ಷ ಕಾಂಡವೊಂದು ಪ್ರತಿದಿನವೂ ಅನಾಹುತಕ್ಕೆ ಆಹ್ವಾನ ನೀಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ರಾಜ್ಯ ಹೆದ್ದಾರಿಯಂತಹ ವಾಹನ ಸಂಚಾರ ಹೆಚ್ಚಿರುವ ಇರುವ ಮಾರ್ಗದಲ್ಲಿ ಕತ್ತರಿಸಿದ ಮರದ ದೊಡ್ಡ ಮುಂಡನ್ನು ಯಾವುದೇ ಎಚ್ಚರಿಕೆ ಫಲಕ, ಪ್ರತಿಬಿಂಬಕ (ರಿಫ್ಲೆಕ್ಟರ್) ಅಥವಾ ಸುರಕ್ಷತಾ ವ್ಯವಸ್ಥೆಯಿಲ್ಲದೆ ಹಾಗೆಯೇ ಬಿಟ್ಟಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜೀವಂತ ಸಾಕ್ಷಿಯಾಗಿದೆ. ರಾತ್ರಿ ವೇಳೆಯಲ್ಲಿ ಈ ಮರದ ಮುಂಡು ವಾಹನ ಸವಾರರಿಗೆ ಕಾಣಿಸದ ಕಾರಣ ಅದು ಯಮ ಸ್ವರೂಪಿಯಾಗಿ ಎದುರಾಗುತ್ತಿದೆ.

ಬುಧವಾರ ತಡರಾತ್ರಿ ಶಿವಮೊಗ್ಗದಿಂದ ಅರಸಾಳಿಗೆ ತೆರಳುತ್ತಿದ್ದ ಅರಸಾಳು ಗ್ರಾಮದ ಗಣೇಶ್ ಶೆಟ್ಟಿ ಅವರು ಎದುರಿನಿಂದ ಬಂದ ಭಾರಿ ವಾಹನ ತಪ್ಪಿಸಲು ಸ್ವಲ್ಪ ಎಡಕ್ಕೆ ಸರಿದ ಸಂದರ್ಭದಲ್ಲೇ ರಸ್ತೆ ಪಕ್ಕದಲ್ಲಿದ್ದ ಈ ಮರದ ಮುಂಡು ಗಮನಕ್ಕೆ ಬಾರದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ.

ಅವರ ಸ್ಯಾಂಟ್ರೋ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗಜ್ಜಾಗಿದ್ದು, ಅದೃಷ್ಟವಶಾತ್ ಗಣೇಶ್ ಶೆಟ್ಟಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ಕೇವಲ ಒಂದು ಅಪಘಾತವಲ್ಲ; ಇದು ಮುಂದೆ ಸಂಭವಿಸಬಹುದಾದ ಅನೇಕ ಪ್ರಾಣಾಪಾಯಕರ ಘಟನೆಗಳಿಗೆ ಮುನ್ನಚ್ಚರಿಕೆಯ ಗಂಟೆಯಾಗಿದೆ.ರಸ್ತೆ ಪಕ್ಕದಲ್ಲಿ ಕತ್ತರಿಸಿದ ಮರದ ಮುಂಡನ್ನು ಹಾಗೆಯೇ ಬಿಟ್ಟು ಹೋಗಬಹುದೇ? ಇದರ ಜವಾಬ್ದಾರಿ ಯಾರದ್ದು? ಒಂದು ವೇಳೆ ಜೀವ ಹಾನಿಯಾಗಿದ್ದರೆ ಹೊಣೆ ಯಾರು ಹೊರುತ್ತಿದ್ದರು? ವಾಹನ ಸವಾರರ ಸುರಕ್ಷತೆ ಬಗ್ಗೆ ಕನಿಷ್ಠ ಕಾಳಜಿಯನ್ನೂ ತೋರದೆ ಇರುವ ಈ ನಿರ್ಲಕ್ಷ್ಯ ತಕ್ಷಣ ಕೊನೆಗೊಳ್ಳಬೇಕಿದೆ. ಆಯನೂರು – ರಿಪ್ಪನ್ ಪೇಟೆ ಮಾರ್ಗದ ನಡುವೆ ಸುಮಾರು 6-7 ವಿವಿಧ ಪ್ರದೇಶದಲ್ಲಿ ಈ ರೀತಿಯ ರಸ್ತೆ ಪಕ್ಕದಲ್ಲೆ ಮರದ ಮುಂಡುಗಳು ಕಂಡು ಬಂದಿದೆ. ಯಾವುದೇ ರಸ್ತೆ ಸುರಕ್ಷತಾ ಕ್ರಮಗಳಿಲ್ಲದೆ ಪ್ರಾಣಹಾನಿಗಾಗಿ ಕಾಯುತ್ತಿರುವಂತೆ ಭಾಸವಾಗುತ್ತಿದೆ.

ಇನ್ನಾದರೂ ಸಂಬಂಧಪಟ್ಟ ಇಲಾಖೆ ಮತ್ತು ಸ್ಥಳೀಯ ಆಡಳಿತ ಈ ಅಪಘಾತ ಸ್ಥಳವನ್ನು ಪರಿಶೀಲಿಸಿ ಕೂಡಲೇ ಮರದ ಮುಂಡನ್ನು ತೆರವುಗೊಳಿಸಿ, ಅಗತ್ಯ ಸುರಕ್ಷತಾ ಸೂಚನಾ ಫಲಕಗಳನ್ನು ಅಳವಡಿಸಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ಅನಾಹುತ ತಪ್ಪಿಸಲಾಗದ ಪರಿಸ್ಥಿತಿ ನಿರ್ಮಾಣವಾಗುವ ಭೀತಿ ಕಾಡುತ್ತಿದೆ.















Leave a Reply