ಶಿವಮೊಗ್ಗ :ದೊಡ್ಡಪೇಟೆ ಪೊಲೀಸ್ ಠಾಣೆ ಪಕ್ಕದಲ್ಲಿರುವ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಒಬ್ಬರು ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ಆತಂಕ ಮೂಡಿಸಿದೆ.
ಮೃತರನ್ನು ಮೊಹಮದ್ ಝಕ್ರಿಯ (55) ಎಂದು ಗುರುತಿಸಲಾಗಿದೆ. ಅವರು ಪಶ್ಚಿಮ ಸಂಚಾರ ಠಾಣೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಕೆಲವು ದಿನಗಳಿಂದ ರಜೆ ಪಡೆದಿದ್ದ ಮೊಹಮದ್ ಝಕ್ರಿಯ ಅವರು, ಮೂರು ದಿನಗಳ ಹಿಂದಷ್ಟೇ ಪುನಃ ಕರ್ತವ್ಯಕ್ಕೆ ಹಾಜರಾಗಿದ್ದರು ಎನ್ನಲಾಗಿದೆ.
ಮೂಲಗಳ ಪ್ರಕಾರ, ನಿನ್ನೆ ರಾತ್ರಿ ಶಿವಮೊಗ್ಗ ಬಸ್ ನಿಲ್ದಾಣದ ಸಮೀಪ ಡ್ಯೂಟಿ ನಿರ್ವಹಿಸಿ ಠಾಣೆಗೆ ವಾಪಸ್ ಆಗಿದ್ದರು. ನಂತರ ಠಾಣೆಯ ಆವರಣದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಮೃತ ಮೊಹಮದ್ ಝಕ್ರಿಯ ಅವರಿಗೆ ಆರೋಗ್ಯ ಸಮಸ್ಯೆಗಳೂ ಇದ್ದವು ಎನ್ನಲಾಗಿದೆ. ಆತ್ಮಹತ್ಯೆಗೆ ಮುನ್ನ ಅವರು ವಾಟ್ಸಪ್ ಗ್ರೂಪ್‌ನಲ್ಲಿ ಡೆತ್‌ನೋಟ್ ಅನ್ನು ಫಾರ್ವರ್ಡ್ ಮಾಡಿದ್ದು, ಅದರಲ್ಲಿ ಠಾಣೆಯ ಕೆಲ ಸಿಬ್ಬಂದಿಯಿಂದ ಕಿರುಕುಳ ಎದುರಿಸುತ್ತಿದ್ದೇನೆ ಎಂಬ ಉಲ್ಲೇಖವಿರುವುದಾಗಿ ಮೂಲಗಳು ತಿಳಿಸಿವೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಕುಟುಂಬದವರಿಗೆ ವಿಷಯವನ್ನು ತಿಳಿಸಲಾಗಿದೆ. ಕುಟುಂಬದವರು ಅಧಿಕೃತ ದೂರು ನೀಡಿದ ಬಳಿಕ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ತಿಳಿಸಿದ್ದಾರೆ.
“ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅವರ ಕುಟುಂಬದವರ ಗಮನಕ್ಕೆ ತಂದಿದ್ದೇವೆ. ಅವರ ಕುಟುಂಬದವರು ದೂರು ಕೊಟ್ಟ ಬಳಿಕ ವಿಚಾರಣೆ ನಡೆಸುತ್ತೇವೆ”
ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.















Leave a Reply