ಆರ್ಯ ಈಡಿಗ ವಿದ್ಯಾವರ್ಧಕ ಸಂಘದ ಅವ್ಯವಹಾರ ಆರೋಪ – ಮಾಜಿ ಶಾಸಕ ಬಿ. ಸ್ವಾಮಿರಾವ್ ಆಮರಣಾಂತ ಉಪವಾಸ ಸತ್ಯಾಗ್ರಹ

NAADI NEWS 20251231 220339 0000 1 ಆರ್ಯ ಈಡಿಗ ವಿದ್ಯಾವರ್ಧಕ ಸಂಘದ ಅವ್ಯವಹಾರ ಆರೋಪ – ಮಾಜಿ ಶಾಸಕ ಬಿ. ಸ್ವಾಮಿರಾವ್ ಆಮರಣಾಂತ ಉಪವಾಸ ಸತ್ಯಾಗ್ರಹ
Spread the love

ಹೊಸನಗರ: ಪಟ್ಟಣದ ತಾಲೂಕು ಆರ್ಯ ಈಡಿಗ ವಿದ್ಯಾವರ್ಧಕ ಸಂಘದಲ್ಲಿ ಭಾರಿ ಅವ್ಯವಹಾರ ಹಾಗೂ ನಿಯಮ ಬಾಹಿರ ಆಡಳಿತ ನಡೆಯುತ್ತಿದೆ ಎಂದು ಆರೋಪಿಸಿ, ಮಾಜಿ ಶಾಸಕ ಬಿ. ಸ್ವಾಮಿರಾವ್ ಅವರು ಪಟ್ಟಣದ ಬಸ್ ನಿಲ್ದಾಣದ ಸಮೀಪದ ಆರ್ಯ ಈಡಿಗ ಸಂಘದ ಎದುರುಗಡೆ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ತಾವು ಶಾಸಕರಾಗಿದ್ದ ಅವಧಿಯಲ್ಲಿ ಸಂಘಕ್ಕೆ ಸೇರಿದ ಜಾಗವನ್ನು ಕಾನೂನುಬದ್ಧವಾಗಿ ಪಡೆದು, ಅಲ್ಲಿ ಮಳಿಗೆಗಳನ್ನು ನಿರ್ಮಿಸಿ ಸಂಘಕ್ಕೆ ನಿರಂತರ ಆದಾಯ ಬರುವಂತೆ ವ್ಯವಸ್ಥೆ ಮಾಡಲಾಗಿತ್ತು ಎಂದು ಸ್ವಾಮಿರಾವ್ ತಿಳಿಸಿದರು. ಆದರೆ ತಮ್ಮ ನಂತರ ಅಧಿಕಾರ ಹಿಡಿದ ಈಡಿಗ ಮುಖಂಡರು ಕಳೆದ ಹತ್ತು–ಹದಿನೈದು ವರ್ಷಗಳಿಂದ ಸಂಘದ ಏಳಿಗೆಗೆ ಯಾವುದೇ ಕ್ರಮ ಕೈಗೊಳ್ಳದೇ, ಸಾಮಾನ್ಯ ಸಭೆ (ಜನರಲ್ ಬಾಡಿ) ಕೂಡ ನಡೆಸದೇ ಅವ್ಯವಹಾರ ನಡೆಸಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.


ಈ ಹಿಂದೆ ಈಡಿಗ ಸಂಘದ ಕಟ್ಟಡ ಉದ್ಘಾಟನೆ ದಿನವೇ ಪ್ರತಿಭಟನೆ ನಡೆಸುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದ ಸ್ವಾಮಿರಾವ್, ಸ್ವಜಾತಿ ಮುಖಂಡರ ಮನವಿಯನ್ನು ಗೌರವಿಸಿ ಆ ಪ್ರತಿಭಟನೆಯನ್ನು ಮುಂದೂಡಿದ್ದರು. ಆದರೆ ಆಡಳಿತ ಮಂಡಳಿಯ ಧೋರಣೆ ಬದಲಾಗದ ಹಿನ್ನಲೆಯಲ್ಲಿ ಇಂದು ಹಠಾತ್ತನೆ ಸಂಘದ ಎದುರು ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ತಮ್ಮ ಬೇಡಿಕೆಗಳು ಈಡೇರದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

img 20251231 wa01404075403860312767293 ಆರ್ಯ ಈಡಿಗ ವಿದ್ಯಾವರ್ಧಕ ಸಂಘದ ಅವ್ಯವಹಾರ ಆರೋಪ – ಮಾಜಿ ಶಾಸಕ ಬಿ. ಸ್ವಾಮಿರಾವ್ ಆಮರಣಾಂತ ಉಪವಾಸ ಸತ್ಯಾಗ್ರಹ


  ಪ್ರಸ್ತುತ ಆಡಳಿತ ಮಂಡಳಿ ಕಾನೂನುಬಾಹಿರವಾಗಿ ಅಧಿಕಾರ ನಡೆಸುತ್ತಿದ್ದು, ತಕ್ಷಣವೇ ಎಲ್ಲಾ ಸದಸ್ಯರು ರಾಜೀನಾಮೆ ನೀಡಬೇಕು. ಸಂಘಕ್ಕೆ ನೂತನ ಆಡಳಿತ ಮಂಡಳಿ ರಚನೆ ಆಗಬೇಕು ಎಂಬುದು ತಮ್ಮ ಪ್ರಮುಖ ಬೇಡಿಕೆ ಎಂದು ಸ್ವಾಮಿರಾವ್ ತಿಳಿಸಿದ್ದಾರೆ.
ಮಾಜಿ ಶಾಸಕ ಜಿ.ಡಿ. ನಾರಾಯಣಪ್ಪ, ಮಾಜಿ ಸಚಿವ ಹರತಾಳು ಹಾಲಪ್ಪ, ರಿಪ್ಪನ್‌ಪೇಟೆ ಎನ್. ಸತೀಶ್, ಡಾ. ರಾಜನಂದಿನಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಸೇರಿದಂತೆ ಹಲವಾರು ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಸ್ವಾಮಿರಾವ್ ಅವರೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದ್ದಾರೆ. ಆದರೂ ಬಿಗಿಪಟ್ಟು ಹಿಡಿದಿರುವ ಸ್ವಾಮಿರಾವ್, ಸದ್ಯಕ್ಕೆ ಧರಣಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.


ಸಂಜೆ ವೇಳೆಗೆ ಸ್ವಾಮಿರಾವ್ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಂಡು ಬಂದ ಹಿನ್ನಲೆಯಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು ಹಾಗೂ ವೈದ್ಯರ ತಂಡ ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ಪರಿಶೀಲನೆ ನಡೆಸಿದರು. ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *