ಅರಸಾಳು: ಹಾರೋಹಿತ್ಲು ಗ್ರಾಮದ ಕೊಳವಂಕ ಸಮೀಪದ ಕಂಬತ್ಮನೆಯಲ್ಲಿ ಚಿರತೆ ಮನೆಯ ಅಂಗಳಕ್ಕೆ ನುಗ್ಗಿರುವ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ವಾಸುದೇವ ಅವರ ಮನೆ ಅಂಗಳದಲ್ಲಿ ಭಾನುವಾರ (ಡಿ.28) ಬೆಳಗ್ಗೆ ಸುಮಾರು 3.45ರ ಸುಮಾರಿಗೆ ಚಿರತೆ ಪ್ರತ್ಯಕ್ಷವಾಗಿ ಮನೆ ಸುತ್ತ ಪ್ರದಕ್ಷಿಣೆ ಹಾಕಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚಿರತೆ ಮನೆಯಲ್ಲಿದ್ದ ಸಾಕು ನಾಯಿಯ ಮೇಲೆ ದಾಳಿ ನಡೆಸಿದೆ. ದಾಳಿಯ ವೇಳೆ ನಾಯಿ ತಪ್ಪಿಸಿಕೊಂಡಿದ್ದು ಬೆಳಿಗ್ಗೆ ನಾಯಿಯ ಸ್ಥಿತಿಯನ್ನು ಗಮನಿಸಿ ಅನುಮಾನಗೊಂಡ ಮಾಲೀಕರು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಚಿರತೆ ದಾಳಿಯ ಭಯಾನಕ ದೃಶ್ಯ ಬಯಲಾಗಿದೆ.
ಯೂಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ.
ಈ ಘಟನೆಯಿಂದ ಹಾರೋಹಿತ್ಲು–ಕೊಳವಂಕ–ಕಂಬತ್ಮನೆ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಜೀವ ಭಯದಲ್ಲಿ ಗ್ರಾಮಸ್ಥರು ದಿನ ಕಳೆಯುವ ಪರಿಸ್ಥಿತಿ ಎದುರಾಗಿದೆ.
ಚಿರತೆ ಸಂಚಾರ ಮುಂದುವರಿದಿರುವ ಸಾಧ್ಯತೆ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ತಕ್ಷಣ ಎಚ್ಚೆತ್ತು ಚಿರತೆಯನ್ನು ಹಿಡಿದು ಸುರಕ್ಷಿತವಾಗಿ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ರಾತ್ರಿ ಸಮಯದಲ್ಲಿ ಸಂಚರಿಸಲು ಜನರು ಭಯಪಡುವ ಸ್ಥಿತಿ ನಿರ್ಮಾಣವಾಗಿದ್ದು, ಇಲಾಖೆ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.















Leave a Reply