ಬಂಟರ–ನಾಡವರ ಸಮುದಾಯವು ಶ್ರಮ, ಶಿಸ್ತು, ಸಂಸ್ಕಾರ ಮತ್ತು ಸೇವೆಗೆ ಹೆಸರುವಾಸಿ
ರಿಪ್ಪನ್ ಪೇಟೆ: ರಿಪ್ಪನ್ ಪೇಟೆಯಲ್ಲಿ ಬಂಟರ ಯಾನೆ ನಾಡವರ ಸಂಘದ ಎರಡನೇ ವರ್ಷದ ವಾರ್ಷಿಕೋತ್ಸವ ಭಾನುವಾರ ಸಂಭ್ರಮ, ಭಕ್ತಿ ಮತ್ತು ಸಮುದಾಯದ ಒಗ್ಗಟ್ಟಿನೊಂದಿಗೆ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಗರದ ಬಂಟರ ಸಂಘದ ಅಧ್ಯಕ್ಷ ಸುಧೀರ್ ಶೆಟ್ಟಿ ಮಾತನಾಡಿ, ಸಂಘಟನೆ ಇಲ್ಲದೆ ಸಮಾಜದಲ್ಲಿ ಶಕ್ತಿ ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಬಂಟರ–ನಾಡವರ ಸಮುದಾಯವು ಶ್ರಮ, ಶಿಸ್ತು, ಸಂಸ್ಕಾರ ಮತ್ತು ಸೇವೆಯನ್ನು ಮೂಲ ಮೌಲ್ಯಗಳಾಗಿ ಅಳವಡಿಸಿಕೊಂಡು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಪ ಅವಧಿಯಲ್ಲಿ ರಿಪ್ಪನ್ ಪೇಟೆ ಬಂಟರ ಯಾನೆ ನಾಡವರ ಸಂಘ ಸಾಧಿಸಿರುವ ಬೆಳವಣಿಗೆ ಶ್ಲಾಘನೀಯವಾಗಿದ್ದು, ಸಹಕಾರ ಹಾಗೂ ಸೇವಾ ಮನೋಭಾವದ ಮೂಲಕ ಸಮಾಜವನ್ನು ಒಗ್ಗೂಡಿಸುವ ಕಾರ್ಯವನ್ನು ಸಂಘ ಸಮರ್ಥವಾಗಿ ನಿರ್ವಹಿಸುತ್ತಿದೆ ಎಂದರು. ಯುವ ಸಮುದಾಯ ಶಿಕ್ಷಣ, ಉದ್ಯೋಗ ಹಾಗೂ ತಂತ್ರಜ್ಞಾನದಲ್ಲಿ ಮುನ್ನಡೆಯುವ ಜೊತೆಗೆ ತಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಮರೆಯಬಾರದು ಎಂದು ಕರೆ ನೀಡಿದ ಅವರು, ಬದಲಾವಣೆಯ ಈ ಕಾಲಘಟ್ಟದಲ್ಲಿ ಒಗ್ಗಟ್ಟೇ ಸಮಾಜದ ನಿಜವಾದ ಬಲ ಎಂದು ಹೇಳಿದರು. ಮಹಿಳೆಯರು ಕುಟುಂಬದ ಜೊತೆಗೆ ಸಂಘದ ಚಟುವಟಿಕೆಗಳಲ್ಲಿಯೂ ಮುನ್ನಡೆದರೆ ಸಮಾಜದ ಅಭಿವೃದ್ಧಿ ಇನ್ನಷ್ಟು ವೇಗವಾಗುತ್ತದೆ ಎಂದರು.
ಸಮಾಜಸೇವೆಯ ಮೂಲಕ ಜನಮಾನಸದಲ್ಲಿ ಗುರುತಿಸಿಕೊಂಡಿರುವ ಆಶಾ–ಪ್ರಕಾಶ್ ಶೆಟ್ಟಿ ದಂಪತಿಗಳಂತಹ ಸೇವಾ ಮನೋಭಾವವನ್ನು ಅನುಸರಿಸಿ, ರಿಪ್ಪನ್ ಪೇಟೆ ಬಂಟರ ಯಾನೆ ನಾಡವರ ಸಂಘ ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೇರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯ್ ಕುಮಾರ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಧೀರ್ ಶೆಟ್ಟಿ (ಸಾಗರ), ಸದಾನಂದ ಶೆಟ್ಟಿ, ಪ್ರಕಾಶ್ ಶೆಟ್ಟಿ (ಸಾಗರ), ಹೊಸನಗರ ತಾಲ್ಲೂಕು ಅಧ್ಯಕ್ಷ ಸದಾನಂದ ಶೆಟ್ಟಿ, ನಾಗರಾಜ್ ಶೆಟ್ಟಿ, ಬಟ್ಟೆ ಮಲ್ಲಪ್ಪ ಹಾಗೂ ಚಂದ್ರಶೇಖರ್ ಶೆಟ್ಟಿ, (ಹೊಸನಗರ) ಉಪಸ್ಥಿತರಿದ್ದರು.
ಉಪಾಧ್ಯಕ್ಷ ವಿನಯ್ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಕಾರ್ಯದರ್ಶಿ ಪವನ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರುಶ್ ಶೆಟ್ಟಿ ಪ್ರಾರ್ಥನೆ ಸಲ್ಲಿಸಿದರು. ಆರ್.ಇ. ಭಾಸ್ಕರ್ ಶೆಟ್ಟಿ ಸ್ವಾಗತಿಸಿದರು. ವನಜಾ ಶೆಟ್ಟಿ ನಿರೂಪಣೆ ನಡೆಸಿ, ಕೃತಿ ಶೆಟ್ಟಿ ವಂದಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ಸತ್ಯನಾರಾಯಣ ಪೂಜೆ ಆಯೋಜಿಸಲಾಗಿದ್ದು, ರಿಪ್ಪನ್ ಪೇಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಬಂಟರ ಯಾನೆ ನಾಡವರ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಕುಟುಂಬಸ್ಥರು ಪಾಲ್ಗೊಂಡಿದ್ದರು.
















Leave a Reply