ರಿಪ್ಪನ್‌ಪೇಟೆ: ಸ್ಪರ್ಧಾತ್ಮಕ ಯುಗದಲ್ಲಿ ಅಂಕಗಳ ಹಿಂದೆ ಓಡುವುದಕ್ಕಿಂತ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ ಉತ್ತಮ ಸಂಸ್ಕಾರಗಳನ್ನು ಬೆಳೆಸುವುದು ಶಿಕ್ಷಕರೂ ಪೋಷಕರೂ ಹೊತ್ತುಕೊಳ್ಳಬೇಕಾದ ಮಹತ್ವದ ಜವಾಬ್ದಾರಿಯಾಗಿದೆ ಎಂದು ಆನಂದಪುರ ಮುರುಘಾರಾಜೇಂದ್ರ ಸಂಸ್ಥಾನ ಮಠದ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಜಿ ತಿಳಿಸಿದರು.
ಪಟ್ಟಣದ ಪ್ರತಿಷ್ಠಿತ ಶ್ರೀ ಬಸವೇಶ್ವರ ಕನ್ನಡ ಹಾಗೂ ಆಂಗ್ಲಮಾಧ್ಯಮ ಶಾಲೆಯ ೩೭ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರುವ ಬದಲು ಅವರ ಆಸಕ್ತಿ, ಪ್ರತಿಭೆ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಬೆಳೆಸಬೇಕಿದೆ. ಇಂದಿನ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತಿದ್ದು, ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ತಯಾರಾಗಬೇಕು ಎಂದರು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮಿ ಉದ್ಘಾಟಿಸಿದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಉಮೇಶ್ ಕುಂಬ್ಳೆ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಕರಿಬಸಪ್ಪ, ಎಸ್‌ಜೆಜೆ ವಿದ್ಯಾಪೀಠದ ನಿರ್ದೇಶಕ ಎಲ್.ವೈ. ದಾನೇಶಪ್ಪ ಲಕ್ಕವಳ್ಳಿ,ಎಚ್.ಎಂ. ವರ್ತೇಶಗೌಡ ಹುಗುಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ದೀಪಾ ಸುದೀರ್, ಅಶ್ವಿನಿ ರವಿಶಂಕರ್, ಹೊಸನಗರ ತಾಲ್ಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಜಗದೀಶ್ ಕಾಗಿನಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರಗಳನ್ನು ವಿತರಿಸಲಾಗಿದ್ದು, ಸಹಕಾರ ನೀಡಿದ ದಾನಿಗಳಾದ ಪಾರ್ವತಿ ಕುಮಾರಸ್ವಾಮಿ, ಪದ್ಮಾ ಸುರೇಶ್, ಟಿ. ಪುರುಷೋತ್ತಮರಾವ್, ಎಸ್. ಚಂದ್ರಪ್ಪ, ಕೆ.ಎ. ರಾಜೇಶ್ ಹಾಗೂ ಸುಮಾ ನಾಗರಾಜ ಅವರನ್ನು ಜಗದ್ಗುರುಗಳು ಸನ್ಮಾನಿಸಿ ಗೌರವಿಸಿದರು.
ಮುಖ್ಯ ಶಿಕ್ಷಕ ಚಂದ್ರಪ್ಪ ಕೆ.ಎನ್ ಸ್ವಾಗತಿಸಿದರು. ನಾಗರಾಜ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭಕ್ಕೆ ವಿಶೇಷ ಮೆರುಗು ನೀಡಿದವು.















Leave a Reply