ಶಿವಮೊಗ್ಗ:ಯುವಜನರಲ್ಲಿ ಕ್ರೀಡಾ ಮನೋಭಾವ, ಸಾಂಸ್ಕೃತಿಕ ಅರಿವು ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಂಸದ್ ಖೇಲ್ ಮಹೋತ್ಸವಕ್ಕೆ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಬುಧವಾರ ನಗರದ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಸಂಸದ್ ಖೇಲ್ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶಾದ್ಯಂತ ಈಗಾಗಲೇ ಒಂದು ಕೋಟಿ ಯುವಕರು ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಮಾತ್ರವೇ ಸುಮಾರು 15 ಸಾವಿರ ಯುವಜನರು ಹೆಸರು ನೋಂದಾಯಿಸಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಭಾರತದಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಮ್ಮ ದೇಶದ ಕ್ರೀಡಾಪಟುಗಳು ಶ್ರೇಷ್ಠ ಸಾಧನೆ ಮಾಡುವಂತಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ ಎಂದ ಅವರು, ಅದಕ್ಕಾಗಿ ತಳಮಟ್ಟದಲ್ಲೇ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ನಿಟ್ಟಿನಲ್ಲಿ ಸಂಸದ್ ಖೇಲ್ ಮಹೋತ್ಸವ ರೂಪುಗೊಂಡಿದೆ ಎಂದು ಹೇಳಿದರು.
ಯುವಕರೇ ದೇಶದ ಶಕ್ತಿ ಎಂದು ಒತ್ತಿ ಹೇಳಿದ ಸಂಸದರು, ಯುವಜನರು ಶಾರೀರಿಕವಾಗಿ ಸದೃಢರಾಗಿದ್ದು, ಮಾನಸಿಕವಾಗಿ ದೃಢರಾಗಬೇಕು ಎಂಬುದು ಕೇಂದ್ರ ಸರ್ಕಾರದ ಧ್ಯೇಯವಾಗಿದ್ದು, ಅಂತರರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ಕ್ರೀಡಾಕೂಟಗಳಲ್ಲಿ ಭಾರತದ ಪ್ರತಿನಿಧಿತ್ವ ಹೆಚ್ಚಾಗಬೇಕೆಂಬ ಮಹದಾಸೆಯೊಂದಿಗೆ ಈ ಯೋಜನೆ ಜಾರಿಗೆ ತರಲಾಗಿದೆ ಎಂದರು.ಪ್ರಧಾನಿ ಮೋದಿ ಅವರ ಸೂಚನೆಯಂತೆ ದೇಶಾದ್ಯಂತ ಸಂಸದರ ನೇತೃತ್ವದಲ್ಲಿ, ಶಾಸಕರ ಸಹಕಾರದೊಂದಿಗೆ ಈ ಮಹೋತ್ಸವ ಆಯೋಜನೆಯಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ವಿವಿಧ ಕ್ಷೇತ್ರಗಳಲ್ಲಿ ಭರ್ಜರಿ ಕ್ರೀಡಾಕೂಟಗಳು ನಡೆಯುತ್ತಿದ್ದು, ಡಿ.25ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆಯನ್ನೂ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಕೆ. ಜಗದೀಶ್, ನಗರಾಧ್ಯಕ್ಷ ಡಿ. ಮೋಹನ್ ರೆಡ್ಡಿ, ಎಸ್. ದತ್ತಾತ್ರಿ, ಜ್ಞಾನೇಶ್ವರ್, ಕೆ.ವಿ. ಅಣ್ಣಪ್ಪ,ಯುವ ಮೋರ್ಚಾ ಕುಕ್ಕೆ ಪ್ರಶಾಂತ, ಯುವ ಮುಖಂಡ ಆದರ್ಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.
















Leave a Reply