ಅರಸಾಳು: ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೆ ಕತ್ತಲಲ್ಲೇ ಬದುಕು ಸಾಗಿಸುತ್ತಿರುವ ವೃದ್ಧರ ಕುರಿತು ನಾಡಿ ನ್ಯೂಸ್ ನಲ್ಲಿ ಪ್ರಕಟವಾದ ವರದಿ ತಾಲ್ಲೂಕು ಆಡಳಿತದ ಗಮನ ಸೆಳೆದಿದೆ. ವರದಿ ಪ್ರಕಟವಾದ 72 ಗಂಟೆಗಳಲ್ಲಿ ತಹಶೀಲ್ದಾರ್ ಭರತ್ ರಾಜ್ ಅವರು ಅಧಿಕಾರಿಗಳೊಂದಿಗೆ ವೃದ್ಧ ವೇಲಾಯುಧನ್ ಅವರ ನಿವಾಸಕ್ಕೆ ದಿಢೀರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಸುಮಾರು 30 ವರ್ಷಗಳಿಂದ ಗುಡಿಸಿಲಿನಲ್ಲಿ ವಾಸಿಸುತ್ತಿರುವ ವೇಲಾಯುಧನ್ ಅವರಿಗೆ ಮನೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳು ಸಿಗದಿರುವುದು ಪರಿಶೀಲನೆಯ ವೇಳೆ ಸ್ಪಷ್ಟವಾಯಿತು. ದಯನೀಯ ವಾಸಸ್ಥಿತಿ, ನೀರು–ವಿದ್ಯುತ್ ಕೊರತೆ ಹಾಗೂ ವಯೋಸಹಜ ಆರೋಗ್ಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.


ಶಾಸಕ ಬೇಳೂರು ಗೋಪಾಲಕೃಷ್ಣ ನಾಡಿನ್ಯೂಸ್ ವರದಿಗಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿ ವೇಲಾಯುಧನ್ ಅವರಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ. ಅಷ್ಟೆ ಅಲ್ಲದೇ ಈ ಕುರಿತು ನಮ್ಮ ಕಛೇರಿ ಯಿಂದ ಪ್ರಗತಿಯನ್ನು ನಿರಂತರ ಗಮನಿಸಿ ಸೌಕರ್ಯ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸ್ಥಳ ಪರಿಶೀಲನೆಯ ನಂತರ ತಹಶೀಲ್ದಾರ್ ಭರತ್ ರಾಜ್ ಅವರು ತಾಲ್ಲೂಕು ಆಡಳಿತದ ವತಿಯಿಂದ ವೃದ್ಧರಿಗೆ ಅಗತ್ಯವಿರುವ ಮನೆ, ಶುದ್ಧ ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕವನ್ನು ಆದ್ಯತೆಯ ಮೇರೆಗೆ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಬಗರ್ ಹುಕುಂ ಹಾಗೂ ತಾಂತ್ರಿಕ ಅಡಚಣೆಗಳಿದ್ದಲ್ಲಿ ಅವುಗಳನ್ನು ಪರಿಶೀಲಿಸಿ ಶೀಘ್ರ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.

ನಾಡಿ ನ್ಯೂಸ್ ವರದಿಯಿಂದ ಆಡಳಿತ ವ್ಯವಸ್ಥೆ ತಕ್ಷಣ ಚುರುಕುಗೊಂಡಿರುವುದು ಗ್ರಾಮೀಣ ಭಾಗದ ವಂಚಿತ ಹಾಗೂ ಅಸಹಾಯ ವರ್ಗಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿರುವುದಾಗಿ ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.















Leave a Reply