ಶಿವಮೊಗ್ಗ :ನಗರದ ಮಹಾವೀರ ವೃತ್ತದಲ್ಲಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಯಿತು. ಕಳೆದ ಎರಡೂವರೆ ವರ್ಷಗಳಿಂದ ಹೊಸ ಬಿ.ಪಿ.ಎಲ್ ಕಾರ್ಡ್‌ಗಳನ್ನು ವಿತರಿಸದೇ ಸಮಾಜದ ಕಟ್ಟಕಡೆಯ ಬಡವರಿಗೆ ಅನ್ಯಾಯ ಮಾಡಲಾಗುತ್ತಿದೆ. ಬಿ.ಪಿ.ಎಲ್ ಕಾರ್ಡ್ ಪಡೆಯಲು ನಿಗದಿಪಡಿಸಿರುವ ವಾರ್ಷಿಕ ಆದಾಯ ಮಿತಿ ರೂ.1.20 ಲಕ್ಷವು ಅವೈಜ್ಞಾನಿಕ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬೀದಿ ಬದಿ ವ್ಯಾಪಾರಿಗಳು, ಕುಶಲಕರ್ಮಿಗಳು, ಕೃಷಿ ಕೂಲಿಕಾರರು, ಮನೆಕೆಲಸ ಮಾಡುವ ಮಹಿಳೆಯರು, ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಖ್ಯಾತ ಬಡ ಕುಟುಂಬಗಳು ಈ ಅವೈಜ್ಞಾನಿಕ ಆದಾಯ ಮಿತಿಯಿಂದಾಗಿ ಬಿ.ಪಿ.ಎಲ್ ಕಾರ್ಡ್ ಪಡೆಯಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಅನ್ನಭಾಗ್ಯ, ವಿಧವಾ ವೇತನ, ಸಂಧ್ಯಾ ಸುರಕ್ಷಾ ವೇತನ, ಇಂದಿರಾ ಗಾಂಧಿ ವೃದ್ಧಾಪ್ಯ ವೇತನ, ಮನಸ್ವಿನಿ ಯೋಜನೆ, ಆಯುಷ್ಮಾನ್ ಭಾರತ್–ಕರ್ನಾಟಕ ಆರೋಗ್ಯ ಕಾರ್ಡ್ ಹಾಗೂ ಗೃಹಲಕ್ಷ್ಮೀ ಯೋಜನೆಯಂತಹ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಗಳಿಂದ ಅವರು ವಂಚಿತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ವೇಳೆ ಕಪ್ಪು ಪಟ್ಟಿ ಧರಿಸಿ ಟಯರ್‌ಗೆ ಬೆಂಕಿ ಹಚ್ಚಿ ಸರ್ಕಾರದ ನಿರ್ಲಕ್ಷ್ಯ ನೀತಿಗೆ ವಿರೋಧ ಸೂಚಿಸಲಾಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರು ಬೆಳಗಾವಿ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿರುವುದನ್ನು ಸಂಘಟನೆ ಸ್ವಾಗತಿಸಿತು. ಆಹಾರ ಸಚಿವರು ಆದಾಯ ಮಿತಿ ಹೆಚ್ಚಿಸುವ ಭರವಸೆ ನೀಡಿರುವುದಕ್ಕೂ ಸಂತೋಷ ವ್ಯಕ್ತಪಡಿಸಿದರೂ, ಈ ಮಿತಿಯನ್ನು ತಕ್ಷಣವೇ ರೂ.5 ಲಕ್ಷಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.ಇದೇ ವೇಳೆ ತೀವ್ರ ಆರೋಗ್ಯ ಸಮಸ್ಯೆ ಇರುವವರಿಗೆ ಬಿ.ಪಿ.ಎಲ್ ಕಾರ್ಡ್ ನೀಡುವ ಘೋಷಣೆಗಳಿದ್ದರೂ ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸದೇ ಜನರನ್ನು ವಂಚಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಮತ್ತು ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ, ಶಂಕ್ರ ನಾಯ್ಕ್, ಟಿ ಹೆಚ್ ಬಾಬು, ಹೆಚ್.ಎಮ್ ಸಂಗಯ್ಯ, ಮಂಜುನಾಥ, ಚೇತನ್ ನಾಯ್ಕ, ಅರಸಾಳು ರಘುನಾಥ, ಬಸವರಾಜ, ಗೋಪಾಲರಾಮ, ವೇದಾನಂದ ಗೌಡ, ಮೋಹನ ಮತ್ತು ಅನೇಕ ಪ್ರತಿಭಟನಾಕಾರರಿದ್ದರು.
















Leave a Reply