ಅನಂತ ಸದ್ಗುಣಗಳಿಂದ ಅನಂತಕೀರ್ತಿ ಲಭಿಸುತ್ತದೆ: ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ
ರಿಪ್ಪನ್ ಪೇಟೆ : ಶರನ್ನವರಾತ್ರಿಯ ಒಂಬತ್ತು ದಿನಗಳ ಕಾಲ ತೀರ್ಥಂಕರರು ಹಾಗೂ ಯಕ್ಷ-ಯಕ್ಷಿಯರನ್ನು ಆರಾಧಿಸಿ, ಸ್ತುತಿಸುವ ಮೂಲಕ ಪೂರ್ವ ಇತಿಹಾಸದ ಧರ್ಮ ಪರಂಪರೆಯ ಅರಿವು ಮೂಡುತ್ತದೆ ಎಂದು ಹೊಂಬುಜ ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದರು.
ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಉತ್ಸವದ ಐದನೇ ದಿನದ ಅಂಗವಾಗಿ ನಡೆದ ಮಂಗಳ ಪ್ರವಚನದಲ್ಲಿ ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬರೂ ಬಾಲ್ಯದಿಂದಲೇ ಸಾತ್ವಿಕ ಮನೋಭಾವವನ್ನು ಬೆಳೆಸಿಕೊಂಡು, ಅನಂತ ಸದ್ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳಬೇಕು. ಇದರಿಂದ ಅನಂತಕೀರ್ತಿಯನ್ನು ಗಳಿಸಲು ಸಾಧ್ಯವಾಗುತ್ತದೆ ಎಂಬ ಧರ್ಮ ಸಂದೇಶವನ್ನು ನೀಡಿದರು.
ಕುಮದ್ವತಿ ತೀರ್ಥದಿಂದ ಅಗ್ರೋಧಕವನ್ನು ಸಾಲಂಕೃತ ಮೆರವಣಿಗೆಯಲ್ಲಿ ವಾದ್ಯಘೋಷ ಹಾಗೂ ಜಿನಭಜನೆಯೊಂದಿಗೆ ಶ್ರೀಕ್ಷೇತ್ರದ ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಯಕ್ಷಿ ಶ್ರೀ ಪದ್ಮಾವತಿ ದೇವಿಯ ಸನ್ನಿಧಿಗೆ ತರಲಾಯಿತು. ಬಳಿಕ ಶ್ರೀಮಠದ ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ ಹಾಗೂ ಶ್ರೀ ಸರಸ್ವತಿ ದೇವಿಯ ಸನ್ನಿಧಿಯಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದವು. ನಂತರ ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಶ್ರೀ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ಷೋಡಶೋಪಚಾರ ಪೂಜೆ ನಡೆಸಲಾಯಿತು.
ಜಿನನಾಮ ಹಾಗೂ ಸ್ತೋತ್ರಗಳ ಪಠಣದೊಂದಿಗೆ ವಿವಿಧ ಬಗೆಯ ಹೂವು, ಹಣ್ಣು ಮತ್ತು ನೈವೇದ್ಯಗಳನ್ನು ಭಕ್ತರು ಸಮರ್ಪಿಸಿ ಭಕ್ತಿಭಾವ ಮೆರೆದರು.
ಶ್ರೀಕ್ಷೇತ್ರಪಾಲ ಶ್ರೀ ನಾಗಸನ್ನಿಧಿಯಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಊರಿನ ಹಾಗೂ ಪರವೂರಿನ ಭಕ್ತರು ಭಾಗವಹಿಸಿದರು. ಶ್ರೀ ಕುಂದಕುಂದ ಗುರುಕುಲ ವಿದ್ಯಾಪೀಠದ ವಿದ್ಯಾರ್ಥಿಗಳು ಮತ್ತು ಶ್ರೀ ಪದ್ಮಾವತಿ ಮಹಿಳಾ ಸಮಾಜದ ಶ್ರಾವಿಕೆಯರು ಭಕ್ತಿಯಿಂದ ಪೂಜೆ ಸಲ್ಲಿಸಿ, ಇಷ್ಟಾರ್ಥಗಳು ನೆರವೇರಲಿ ಎಂದು ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಮಹಾವೀರ ಸ್ವಾಮಿ ಹಾಗೂ ಶ್ರೀ ಆದಿನಾಥ ಸ್ವಾಮಿಯ ಸನ್ನಿಧಿಯಲ್ಲಿ ಭಕ್ತರು ದರ್ಶನ ಪಡೆದರು. ತ್ರಿಕೂಟ ಜಿನಾಲಯ, ಭೋಗಾರ ಬಸದಿ ಹಾಗೂ ನಗರ ಜಿನಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ರಾತ್ರಿ ಅಷ್ಟಾವಧಾನ ಸಹಿತ ಪೂಜಾ ವಿಧಾನವನ್ನು ಭಕ್ತರು ವೀಕ್ಷಿಸಿದರು.
ಪೂಜ್ಯ ಸ್ವಾಮೀಜಿಯವರು ಭಕ್ತರಿಗೆ ಶ್ರೀಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ರಜತ ಚಿತ್ರಿಕೆಯ ಹಿನ್ನೆಲೆಯ ವರ್ಣಮಯ ಸೀರೆಯಲ್ಲಿ ಶ್ರೀದೇವಿಯ ಅಲಂಕಾರವು ಭಕ್ತರ ಕಣ್ಮನ ಸೆಳೆಯಿತು. ಸೇವಾಕರ್ತರಾದ ಗೌಹಾಟಿಯ ರಾಕೇಶ್ ಕುಟುಂಬದವರಿಗೂ ಸ್ವಾಮೀಜಿಯವರು ಆಶೀರ್ವಾದ ನೀಡಿದರು.
















Leave a Reply