ಹೊಂಬುಜ ಶ್ರೀಕ್ಷೇತ್ರದಲ್ಲಿ ಶರನ್ನವರಾತ್ರಿ ಉತ್ಸವದ ಎರಡನೇ ದಿನದ ಪೂಜೆ

Addaheading 20261012 201226 0000 ಹೊಂಬುಜ ಶ್ರೀಕ್ಷೇತ್ರದಲ್ಲಿ ಶರನ್ನವರಾತ್ರಿ ಉತ್ಸವದ ಎರಡನೇ ದಿನದ ಪೂಜೆ
Spread the love

ಧರ್ಮೋಪದೇಶಗಳು ಜೀವನ ನಿರ್ವಹಣೆಗೆ ನಂದಾದೀಪ – ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ

ರಿಪ್ಪನ್ ಪೇಟೆ: ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಿರುವ ಧರ್ಮೋಪದೇಶಗಳು ಪ್ರತಿಯೊಬ್ಬರ ಜೀವನ ನಿರ್ವಹಣೆಗೆ ನಂದಾದೀಪದಂತೆ ಮಾರ್ಗದರ್ಶನ ನೀಡುತ್ತವೆ ಎಂದು ಅತಿಶಯ ಶ್ರೀಕ್ಷೇತ್ರ ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ತಿಳಿಸಿದರು.

ಶ್ರೀಕ್ಷೇತ್ರ ಹೊಂಬುಜದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಉತ್ಸವದ ದ್ವಿತೀಯ ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಂಗಲ ಪ್ರವಚನ ನೀಡಿದ ಅವರು, ಸನಾತನ ಧರ್ಮಗ್ರಂಥಗಳ ಪರಂಪರೆಯನ್ನು ಮುನಿಶ್ರೀಗಳು, ಆರ್ಯಿಕೆಯರು ಹಾಗೂ ಭಟ್ಟಾರಕ ಮಹಾಸ್ವಾಮಿಗಳು ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂದರು.

ಶ್ರೀಕ್ಷೇತ್ರದ ಅಧಿನಾಯಕ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಹಾಗೂ ಅಧಿದೇವತೆ ಮಹಾಮಾತೆ ಶ್ರೀ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ಷೋಡಶೋಪಚಾರ ಪೂಜೆ ನೆರವೇರಿಸಿ ಮಾತನಾಡಿದ ಸ್ವಾಮೀಜಿ, ಜೈನಾಗಮ ಪದ್ಧತಿಯು ಸಮಾಜದ ಸಂಕಟ ಹಾಗೂ ಕಂಟಕಗಳನ್ನು ನಿವಾರಿಸುವ ಧರ್ಮಮಾರ್ಗವನ್ನು ಸಾರುತ್ತದೆ ಎಂದು ತಿಳಿಸಿದರು.

  ಶರನ್ನವರಾತ್ರಿ ಉತ್ಸವದ ಎರಡನೇ ದಿನದ ಅಂಗವಾಗಿ ಶ್ರೀಕ್ಷೇತ್ರದ ವಿವಿಧ ದೇವತಾ ಸನ್ನಿಧಿಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ವಿವಿಧ ಹೂವು-ಹಣ್ಣುಗಳನ್ನು ಅರ್ಪಿಸಿ, ಜಿನನಾಮ ಸ್ತೋತ್ರದೊಂದಿಗೆ ಪೂಜೆ ಸಲ್ಲಿಸಲಾಯಿತು.

ಶ್ರೀಮಠದ ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ ಹಾಗೂ ಶ್ರೀ ಸರಸ್ವತಿ ದೇವಿಯ ಸನ್ನಿಧಿಗಳಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು. ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಕ್ಷೇತ್ರಪಾಲ ಹಾಗೂ ಶ್ರೀ ನಾಗಸನ್ನಿಧಿಗಳಲ್ಲಿ ನಿತ್ಯಪೂಜೆ ನೆರವೇರಿತು.

ವಾದ್ಯಗೋಷ್ಠಿಯೊಂದಿಗೆ ಸಂಗೀತ ಪೂಜೆ ಹಾಗೂ ಸಾಮೂಹಿಕ ಜಿನಭಜನೆ ನಡೆಯಿತು. ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಹಾಗೂ ಹೊರನಾಡಿನ ಭಕ್ತರು ಭಾಗವಹಿಸಿದರು. ರಾತ್ರಿ ಅಷ್ಟಾವಧಾನ, ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿತು.

ಈ ಸಂದರ್ಭದಲ್ಲಿ ಶ್ರೀಗಳವರ ಪಟ್ಟದ ಪೀಠವನ್ನು ಸಂಪ್ರದಾಯದಂತೆ ಅಲಂಕರಿಸಲಾಗಿತ್ತು. ಪೂರ್ವ ಭಟ್ಟಾರಕರನ್ನು ಸ್ಮರಿಸಿ ಗೌರವ ಸಲ್ಲಿಸಲಾಯಿತು. ಬಳಿಕ ಶ್ರೀಗಳು ಭಕ್ತರಿಗೆ ಶ್ರೀಫಲ ಹಾಗೂ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ಧಾರ್ಮಿಕ ಕಾರ್ಯಕ್ರಮಗಳಿಗೆ ಸೇವೆ ಸಲ್ಲಿಸಿದ ಮೂಡಬಿದಿರೆಯ ಶ್ರೀ ಶ್ರುತಾಂಜನ್ ಕುಟುಂಬದವರನ್ನು ಗೌರವಿಸಲಾಯಿತು. ಶ್ರೀಕ್ಷೇತ್ರದ ಸನ್ನಿಧಿಯಲ್ಲಿ ಮುತ್ತಿನ ಸುಶೋಭಿತ ಅಲಂಕಾರ ಗಮನ ಸೆಳೆಯಿತು.

ಶರನ್ನವರಾತ್ರಿ ಉತ್ಸವದ ಅಂಗವಾಗಿ ಶ್ರೀಕ್ಷೇತ್ರ ಹೊಂಬುಜದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಭಕ್ತಿಭಾವದಿಂದ ಮುಂದುವರಿದವು.

Leave a Reply

Your email address will not be published. Required fields are marked *

error: Content is protected !!